ನಿರ್ಲಿಪ್ತರು ಯಾರು?

ಕಥೆಗಳ ಮೂಲಕ ಮನಸ್ಸಿಗೆ ಸುಲಭವಾಗಿ ನೀತಿ ನಾಟುವುದು ನಿಜ.ಇಂದು ಅಜ್ಜ ಹೇಳಿದ ಮತ್ತೊಂದು ಕಥೆ ಹಂಚಿಕೊಳ್ಳುವ ಆಸೆಯಾಗಿದೆ. ಹಿಂದೆ ಒಬ್ಬ ರಾಜನಿದ್ದನು.ರಾಜ್ಯವನ್ನು ಸುಭೀಕ್ಷವಾಗಿ ನಡೆಸುತ್ತಿದ್ದನು.ಪ್ರಜೆಗಳ ಪಾಲನೆ ಚೆನ್ನಾಗಿ ಮಾಡುತ್ತಿದ್ದನು.ಆತನು ಧರ್ಮಿಷ್ಟನೂ ದಯಾಳುವೂ ಆಗಿದ್ದನು.ಗುಣದಲ್ಲಿ ಒಳ್ಳೆಯವನೂ ಹಾಗೂ ಎಷ್ಟೇ ಸಂಪತ್ತಿದ್ದರೂ ಮತ್ತೆ ಹಣಕ್ಕೆ ಮೋಹಿತನಾಗದೇ ಬಾಳುತ್ತಿದ್ದನು.ತೃಪ್ತನು.ಸಂಸಾರದಲ್ಲಿದ್ದರೂ ತಾವರೆಯ ಎಲೆಯ ಮೇಲಿನ ನೀರಿನಂತೆ ಸುಖಗಳಿಗೆ ಅಂಟಿಯೂ ಅಂಟದಂತಿದ್ದನು. ಒಮ್ಮೆ ಇದ್ದಕ್ಕಿದ್ದಹಾಗೆ ಶತ್ರು ಸೈನ್ಯ ಆತನ ರಾಜ್ಯಕ್ಕೆ ದಂಡೆತ್ತಿ ಬಂದು ಸ್ವಲ್ಪವೂ ಮುನ್ಸೂಚನೆ ನೀಡದೇ ಆತನ ಸೈನ್ಯವನ್ನು ಸೋಲಿಸಿ,ಅವನನ್ನು ಬೀದಿ ಪಾಲು ಮಾಡಿತು.ಅರಮನೆಯ ವೈಭೋಗ,ಹೆಂಡತಿ, ಮಕ್ಕಳು,ಆಸ್ತಿ ಅಂತಸ್ತು ಎಲ್ಲಾ ಕಳೆದುಕೊಂಡು ಊರ ಹೊರಗೆ ಒಂದು ಗುಡಿಸಿಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿತು.ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಹಾಗಾಯ್ತು.ಕಷ್ಟಗಳ ಸುಳಿಗೆ ಸಿಲುಕಿದ ರಾಜನಿಗೆ ಬಹಳ ಬೇಸರವಾಯಿತು,ದುಃಖ ಅನುಭವಿಸಲಾರದೇ ನೊಂದು ಬಳಲಿದ.
ಇಷ್ಟರಲ್ಲಿ ರಾಜನಿಗೆ ಇದ್ದಕ್ಕಿದ್ದಂತೆ ಎಚ್ಚರ ವಾಯಿತು."ಅರೆ ಇಷ್ಟು ಹೊತ್ತು ಕಂಡದ್ದೆಲ್ಲಾ ಕನಸೇ?" ಎಂದು ನೆಮ್ಮದಿಯ ಉಸಿರು ಬಿಟ್ಟ. ತನ್ನ ಕನಸಿನಿಂದ ರಾಜನಿಗೆ ಜ್ಞಾನೋದಯವಾಯಿತು."ನಾನು ಇಷ್ಟುದಿನ ಸುಖವನ್ನು ಮಾತ್ರ ಅಂಟದೇ ಬದುಕಿದೆ,ಆದರೆ ದುಃಖಬಂದಾಗ ಬದುಕುವ ಶಕ್ತಿಯೇ ನನ್ನಲ್ಲಿ ಇಲ್ಲವಾಗಿತ್ತು,ದುಃಖವನ್ನು ಅಂಟದೇ ಬದುಕುವ ಮನೋಬಲ ನನಗಿನ್ನೂ ಬಂದಿಲ್ಲ,ಕನಸಿನಲ್ಲಿ ಬಂದ ಕಷ್ತಕ್ಕೇ ಕಂಗಾಲಾಗಿ ಹೋದೆನಲ್ಲಾ!ಇನ್ನು ನಿಜವಾಗಿ ಕಷ್ಟ ಬಂದರೆ?"ಎಂದು ಎಚ್ಚೆತ್ತುಕೊಂಡ.ದುಃಖದಲ್ಲೂ ಸಹ ದೃಢವಾಗಿ,ನಿಶ್ಚಲವಾಗಿ ನಿಲ್ಲುವಂತೆ ಮನಸ್ಸನ್ನು ಪಕ್ವಗೊಳಿಸಿಸುವ ಪ್ರಯತ್ನದಲ್ಲಿ ತೊಡಗಿದ.
ನಾವೂ ಹಾಗೇ ನಮ್ಮ ಜೀವನದಲ್ಲಿ ಪ್ರತಿ ವಿಚಾರವನ್ನೂ ಅಂಟಿಯೂ ಅಂಟದಂತೆ ವ್ಯವಹರಿಸುತ್ತಿದ್ದರೆ ಆಂತರಿಕ ಶಕ್ತಿ ಹೆಚ್ಚುತ್ತದೆ.ಇದನ್ನೇ ನಿರ್ಲಿಪ್ತ ಮನೋಭಾವ ಎನ್ನುವುದು.ಅದನ್ನು ಪಾಲಿಸುವವರೇ ನಿರ್ಲಿಪ್ತರು.ನಾವು ಏಕೆ ಅಂಟದಂತಿರಬೇಕು? ಎನ್ನುವುದನ್ನು ತಿಳಿಯೋಣ.ಈ ಪ್ರಪಂಚದಲ್ಲಿ ಯಾವುದು ನಮ್ಮದಲ್ಲವೋ ಅದನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.ಅದರಿಂದ ಆಂತರಿಕ ಶಕ್ತಿ ಕ್ಷೀಣಿಸುತ್ತಿದೆ ಎಂದರೆ ತಪ್ಪಾಗಲಾರದು.ನನ್ನದು ನನ್ನದು ನನ್ನದು ಎನ್ನುವುದು ಮನಸ್ಸಿಗೆ ಭಾರವಾಗುತ್ತಿದೆಯೇ ಹೊರತು ಹಗುರವಾಗುತ್ತಿಲ್ಲ.ಈ ರೀತಿ ವಿವೇಕದಿಂದ ಯೋಚಿಸಿ ಕಷ್ಟ-ಸುಖವೆರೆಡರಲ್ಲೂ ಅಂಟಿಯೂ ಅಂಟದಂತೆ ವ್ಯವಹರಿಸುತ್ತಿದ್ದರೆ ಆಂತರಿಕ ಶಕ್ತಿ ಹೆಚ್ಚಾಗಿ,ಸುಖ ದುಃಖಗಳಿಗೆ ಅತೀತವಾದ ಉನ್ನತ ಆತ್ಮಸ್ಥಿತಿಯನ್ನು ಹೊಂದಬಹುದು.