ಲಕ್ಷ್ಮೀಪತಿ

ಚಿಕ್ಕ ಊರೊಂದರಲ್ಲಿ ಒಬ್ಬ ವ್ಯಾಪಾರಿ ಇದ್ದ.ವ್ಯಾಪಾರ ಚೆನ್ನಾಗೇ ನಡೆಯುತ್ತಿತ್ತು,ಆದರೆ ಆತನಿಗೆ ಕಡಿಮೆ ಅವಧಿಯಲ್ಲೇ ಅತಿ ಹೆಚ್ಚು ಮಾಡಬೇಕೆಂಬ ಆಸೆಯಾಯಿತು. ಎಷ್ಟು ದುಡಿದರೂ ಹೆಚ್ಚು ಹಣ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ.ಕಡೆಗೆ ಒಂದು ದಿನ ತನ್ನ ಮನೆಯಲ್ಲೇ ಧನಲಕ್ಷ್ಮಿಯನ್ನು ಕುರಿತು ಧ್ಯಾನಕ್ಕೆ ಕುಳಿತ.ಬಹಳ ನಿಷ್ಟೆಯಿಂದ ದಿನ ವಾರ ತಿಂಗಳುಗಳ ಪರಿವೇ ಇಲ್ಲದೆ ಧ್ಯಾನಿಸಿದ.ಒಂದುದಿನ ಅವನ ಕಣ್ಮುಂದೆ ಲಕ್ಶ್ಮಿ ಪ್ರತ್ಯಕ್ಷವಾದಳು,ಏನು ವರ ಬೇಕೆಂದು ಕೇಳಲು ಆಸ್ತಿ ಅಂತಸ್ತು ಹಣ ಬಂಗಾರ ಎಲ್ಲವನ್ನೂ ಕೇಳತೊಡಗಿದ.ಅದಕ್ಕೆ ಲಕ್ಷ್ಮಿಯು "ಅಯ್ಯಾ ನಾನು ವರ ಕೊಡುವುದಾದರೆ ಈ ಊರಿನವರಿಗೆಲ್ಲಾ ಕೊಡುವೆ,ನಿನಗೊಬ್ಬನಿಗೇ ಕೊಡಲಾಗದು"ಎಂದಳು.ವ್ಯಾಪಾರಿ ಯಾರಿಗೆ ವರಕರುಣಿಸಿದರೇನು ನನಗೆ ಸಿಕ್ಕರೆ ಸಾಕು ಎಂದು "ಹೂ"ಎಂದ.ಲಕ್ಷ್ಮೀಪತಿ ಆದ. ಮರುದಿನ ಮನೆಯಲ್ಲೆಲ್ಲಾ ಚಿನ್ನದ ಆಭರಣಗಳು!ನಾಣ್ಯಗಳು!ವಜ್ರ !ವೈಡೂರ್ಯಗಳು! ಅಪಾರ ಸಂತೋಷವಾಯಿತು ವ್ಯಾಪಾರಿಗೆ.ಸರಿ ಬಹಳ ದಿವಸಗಳಿಂದ ತಪಸ್ಸಿನ ಹಸಿವಿನಲ್ಲಿದ್ದ ಕಾರಣ ಏನಾದರೂ ದಿನಸಿ ತರಕಾರಿಗಳನ್ನು ತರಲು ಅಂಗಡಿಗೆ ಹೋದ.ಅಂಗಡಿ ಬಾಗಿಲು ಮುಚ್ಚಿತ್ತು,ಕಾರಣ ಕೇಳಲು ಅವರ ಬಳಿಯೂ ಸಾಕಷ್ಟು ಆಸ್ತಿ ಬಂದಾದ ಕಾರಣ ಅವರು ಚಿಲ್ಲರೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದರು,ಸರಿ ಫಲಹಾರ ಮಂದಿರಕ್ಕೆ ಹೋದರೂ ಅದೇ ಮಾತೆ,ಹೀಗೇ ಎಲ್ಲರೂ ವ್ಯಾಪಾರ ಮಾಡುವುದನ್ನು ಬಿಟ್ಟು ಚಿನ್ನದ ನಾಣ್ಯಗಳನ್ನು ಹಿಡಿದು ಓಡಾಡ ತೊಡಗಿದರು.ಕಡೆಗೆ ಆ ವ್ಯಾಪಾರಿಗೆ ತನ್ನ ತಪ್ಪು ಅರಿವಾಗಿ ಮತ್ತೆ ಲಕ್ಷ್ಮಿಯನ್ನು ಕುರಿತು ಧ್ಯಾನ ಮಾಡಿ ಎಲ್ಲವನ್ನೂ ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿದ.ಮೊದಲಿನಂತೆ ಕಷ್ಟಪಟ್ಟು ದುಡಿದು ತೃಪ್ತಿಯಿಂದ ಜೀವನ ಮಾಡಿದ.