ಕೆಲಸಕ್ಕೆ ಬಾರದ್ದು

ಒಂಟೆ ಮರಿಯೊಂದು ತನ್ನ ತಾಯಿ ಒಂಟೆಯನ್ನು ಕೇಳಿತು"ಅಮ್ಮಾ ನಮಗೆ ಬೆನ್ನಿನಮೇಲೆ ಏಕೆ ಉಬ್ಬು ಇದೆ?".ಅದಕ್ಕೆ ತಾಯಿ ಒಂಟೆ"ಮಗೂ ಮರಳುಗಾಡಿನಲ್ಲಿ ಹೆಚ್ಚುದಿನಗಳ ಕಾಲ ನೀರು ಸಿಗದಿದ್ದರೂ ನಮ್ಮ ಬೆನ್ನಿನಲ್ಲಿ ನೀರು ಶೇಖರಿಸಿಡಲು ಭಗವಂತ ಕೊಟ್ಟಿದ್ದು"ಎಂದಿತು. "ಅಮ್ಮಾ ನಮ್ಮ ಕಾಲುಗಳು ಮಾತ್ರ ತೆಳ್ಳಗೆ ಮತ್ತು ಪಾದಗಳೇಕೆ ಇಷ್ಟು ಅಗಲವಾಗಿವೆ?" ಎಂದು ಮರಿ ಪ್ರಶ್ನಿಸಿತು.ತಾಯಿ ಒಂಟೆ "ಮಗೂ ಮರಳುಗಾಡಿನಲ್ಲಿ ಸಡೆಯಲು ಹಾಗಿದ್ದರೆ ಅನುಕೂಲ"ಎಂದಿತು.ಮರಿ ಮತ್ತೆ "ಅಲ್ಲಮ್ಮ ನಮ್ಮ ಕಣ್ಣಿನ ರೆಪ್ಪೆಗಳೇಕೆ ಇಷ್ಟೊಂದು ಉದ್ದವಾಗಿ ದಟ್ಟವಾಗಿದೆ?"ಎಂದು ಕೇಳಿತು.ತಾಯಿ "ಅದು ಮರಳುಗಾಡಿನಲ್ಲಿ ಸುಂಟರಗಾಳಿ ಬೀಸಿದಾಗ ಧೂಳಿನಿಂದ ನಮ್ಮ ಕಣ್ಣನ್ನು ಕಾಪಾಡುತ್ತದೆ ಮಗೂ ಅದೂ ಒಂಟೆಗಳಿಗೆ ದೇವರ ಕೊಡುಗೆ" ಎಂದು ಉತ್ತರಿಸಿತು. ಅದಕ್ಕೆ "ಹಾಗದರೆ ನಡಿ ಹೋಗೋಣ ಮರಳುಗಾಡಿಗೆ,ಈ ಮೃಗಾಲಯದಲ್ಲಿ ಏನು ಕೆಲಸ?"ಎಂದಿತು ಮೃಗಾಲಯದಲ್ಲೇ ಜನಿಸಿದ್ದ ಒಂಟೆ ಮರಿ.
ನೀತಿ:ಕೆಲಸಕ್ಕೆ ಬಾರದ ವಿದ್ಯೆ, ಬುದ್ಧಿ, ಹಣಬಲ,ತೋಳ್ ಬಲ,ಅಧಿಕಾರ.....ಏನಿದ್ದರೇನು? ಎಷ್ಟಿದ್ದರೇನು?