ಕರುಳ ಮಿಡಿತ

ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರೈತನೊಬ್ಬ ತನ್ನ ಮನೆಯ ಮುಂದಿನ ಅಂಗಳದಲ್ಲಿ ಸೌದೆಯನ್ನು ಸೀಳುವ ಕೆಲಸದಲ್ಲಿ ತೊಡಗಿದ್ದ.ಕೊಡಲಿಯ ಏಟು ಮರದ ದಿಮ್ಮಿಗೆ ಪ್ರತಿಬಾರಿ ಬೀಳುವಾಗಲೂ ಅವನ ಮೈಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು,ದಣಿದು ಬಾಯಾರಿದ್ದರೂ ಲೆಕ್ಕಿಸದೆ ಒಂದೇ ಸಮನೆ ದುಡಿಯುತ್ತಿದ್ದ ಮಗನನ್ನು ಕಂಡು ಅವನ ತಾಯಿ" ಮಗ ಶಾಖ ಜಾಸ್ತಿ ಅಗ್ತಿದೆ ಮನೆ ಒಳಕ್ಕೆ ಬಾ,ಆಮೇಲೆ ಸೌದೆ ಹೊಡೆದರೆ ಆಯ್ತು" ಅಂದಳು.ಆದರೆ ಅದನ್ನು ಲೆಕ್ಕಿಸದೆ ಸುಡು ಸುಡು ಬಿಸಲಿನಲ್ಲಿ ತನ್ನ ಕೆಲಸ ಮುಂದುವರೆಸಿದ ಮಗ ಪದೇ ಪದೇ ತಾಯಿಯ ಕೂಗನ್ನು ಕೇಳಿ ತಾಳ್ಮೆ ಕಳೆದು ಒಮ್ಮೆ ರೇಗಿದ"ಏ ನೀನು ಒಳಕ್ಕೆ ಹೋಗಮ್ಮಾ,ಹೋಗಿ ಬೇರೆ ಕೆಲಸ ನೋಡು"ಎಂದು ಬೈದ.ಒಳಕ್ಕೆಹೋದ ತಾಯಿ ವರುಶವೂ ತುಂಬದ ತನ್ನ ಮೊಮ್ಮಗನನ್ನು ಎತ್ತು ತಂದು ಸುಡುಬಿಸಿಲಿನಲ್ಲಿ ಮಲಗಿಸಿದಳು.ಇದನ್ನು ಕಂಡು ಮಗನಿಗೆ ಬಹಳ ಕೋಪ ಬಂದಿತು"ನಿಂಗೇನ್ ಬುದ್ಧಿಗಿದ್ಧಿ ಇದ್ದೀಯಾ? ಅಲ್ಲಾ ಮಗೂನ ಬಿಸಿಲಿನಲ್ಲಿ ಮಲಗಿಸಿದ್ದೀಯಲ್ಲಾ ಮೈ ಸುಡಲ್ವಾ?" ಎಂದು ಗದರಿದ.ಅದಕ್ಕೆ ತಾಯಿ "ಸುಟ್ಟರೆ ನಿಂಗೇನಾಗುತ್ತೆ?" ಎಂದು ಪ್ರಶ್ನಿಸಿದಳು.ಅದಕ್ಕೆ ಆ ರೈತ "ಅದು ನನ್ನ ಮಗು, ಕರಳು ಚುಳ್ ಅನ್ನಲ್ವಾ" ಎಂದ.ತಕ್ಷಣ ತಾಯಿ "ನೀನು ಬಿಸಿಲಿನಲ್ಲಿ ಸುಡ್ತಾ ಇದ್ದರೆ ನನ್ನ ಕರಳು ಏನು ಆಗಬೇಕು?" ಎಂದಳು.ಕೂಡಲೇ ತಾಯಿಯ ಮಮತೆ ಅರಿತು ಮನೆಯೊಳಕ್ಕೆ ಹೊರಟ ಮಗ.