ಆಸ್ತಿ

ದೊಡ್ಡ ಪಟ್ಟಣದ ಬಲು ಶ್ರೀಮಂತ ಕುಟುಂಬದ ಒಬ್ಬ ತಂದೆ ತನ್ನ ಮಗನಿಗೆ ಬಡತನದ ಅರಿವಾಗಲೆಂದು ದೂರದ ಹಳ್ಳಿಗೆ ಕರೆದೊಯ್ದ.ಅಲ್ಲಿ ನಾಲ್ಕಾರು ದಿನ ಕಳೆದು ಮರಳಿ ಮನೆಗೆಬಂದ ನಂತರ ತಂದೆ ಮಗನನ್ನು ಕೇಳಿದ "ಹೇಗಿತ್ತು ಮಗು ಹಳ್ಳಿ ಜೀವನ? ನೋಡಿದೆಯಾ ಬಡತನ ಅಂದರೆ ಏನೂ ಅಂತಾ?"ಎಂದ.ಮಗ "ಹೌದು"ಎಂದು ಸಪ್ಪೆಯಾಗಿ ಉತ್ತರಿಸಿದ.ತಂದೆ ಮತ್ತೆ"ಇದರಿಂದ ಏನು ಪಾಠ ಕಲಿತೆ ನೀನು?"ಎಂದು ಪ್ರಶ್ನಿಸಿದ.ಅದಕ್ಕೆ ಮಗ"ಹೌದಪ್ಪಾ ನೋಡಿದೆ ನಮ್ಮ ಮನೆಯಲ್ಲಿ ಒಂದು ನಾಯಿಯಿದೆ ಅವರಿಗೆ ಆರೆಂಟು ಇವೆ,ನಮಗೆ ಈಜಲು ಪುಟ್ಟ ಪೂಲ್ ಇದೆ ಅವರಿಗೆ ದೊಡ್ಡ ಕೆರೆಯೇ ಇದೆ,ನಮಗೆ ಅಂಗಳದಲ್ಲಿ ವಿದೇಶಿ ಲಾಟಿನ್ ಇವೆ,ಅವರಿಗೆ ನಕ್ಷತ್ರಗಳೇ ಇವೆ,ನಮಗೆ ಆಡಲು ಬೇಲಿಯವರೆಗೆ ಅಂಗಳ ಇದೆ ಅವರಿಗೆ ಕಣ್ಣು ಹರಿಯುವಷ್ಟೂ ಅಂಗಳವೇ,ನಮಗೆ ದೊಡ್ಡ ಮನೆಯಿದೆ ಅವರಿಗೆ ತೋಟ,ಹೊಲ,ಗದ್ದೆ,ಬಯಲು ಎಲ್ಲಾ ಇವೆ,ನಮ್ಮನ್ನು ರಕ್ಷಿಸಲು ಸುತ್ತಲೂ ಗೋಡೆಗಳಿವೆ ಅವರ ಸುತ್ತಲೂ ಬರೀ ಗೆಳೆಯರೇ ಇದ್ದಾರೆ".ಇಷ್ಟು ಕೇಳಿದ ತಂದೆಯ ಮುಖ ಮುದುಡಿತು.ಮಗ ಮತ್ತೊಂದು ಮಾತು ಹೇಳಿದ"ಅಪ್ಪಾ ತುಂಬಾ ಥ್ಯಾಂಕ್ಸ್ ಅಪ್ಪ ನಾವೆಷ್ಟು ಬಡವರೆಂದು ನನಗೆ ಈಗ ಅರಿವು ಮಾಡಿಕೊಟ್ಟಿದ್ದಕ್ಕೆ."ಎಂದು ಹೇಳಿದ.
ನೀತಿ: ಪ್ರತಿಯೊಂದು ವಿಷಯವನ್ನು ಬೇರೊಂದು ದೃಷ್ಟಿಯಿಂದಲೂ ನೋಡಬಹುದು, ಮಕ್ಕಳಿಗೆ ಅರಿವು ಮೂಡಿಸುವುದು ಸುಲಭದ ಕೆಲಸವಲ್ಲ.