ಮನವರಿಕೆ

ಮುದುಕನೊಬ್ಬನು ತನ್ನ ಹೆಂಡತಿಯನ್ನು ಕಳೆದುಕೊಂಡ ನಂತರ ತನ್ನ ಮಗನ ಮನೆಯಲ್ಲೇ ವಾಸ ಮಾಡಲು ನಿರ್ಧರಿಸಿದ.ವಯಸ್ಸಿನ ಅಂತರದ ಕಾರಣ ಮಗ ಸೊಸೆ ಆಗಾಗ್ಗೆ ಮುದುಕನ ಮನಸ್ಸಿಗೆ ನೋವಾಗುವ ಹಾಗೆ ನಡೆಯುತ್ತಿದ್ದರು.ಊಟ ಮಾಡುವಾಗ ತಟ್ಟೆಯಿಂದ ಆಹಾರ ಚೆಲ್ಲಿದರೆ,ಹಾಲು ಲೋಟದಿಂದ ಚೆಲ್ಲಿದರೆ,ಕೈಜಾರಿ ಚಮಚ ಕೆಳಗೆ ಬಿದ್ದರೆ ಮಗ ಸಿಟ್ಟಿನಲ್ಲಿ ತಂದೆ ಎನ್ನುವುದನ್ನೇ ಮರೆತು ರೇಗುತ್ತಿದ್ದ.ಕೈಲಾಗದ,ಕೈನಡುಗುವ ಮುದುಕ ತನ್ನ ಮಗ ಸೊಸೆ ಏನು ಹೇಳಿದರೂ ಸಹಿಸಿಕೊಂಡು ಬದುಕು ಸಾಗಿಸುತ್ತಿದ್ದ.ದಿನಾ ಊಟಕ್ಕೆ ಒಟ್ಟಿಗೆ ಕುಳೀತುಕೊಳ್ಳುತ್ತಿದ್ದವರು ಮುದುಕನನ್ನು ಬೇರೊಂದು ಮೇಜು ಹಾಕಿ ಕೂಡಿಸಲಾಯಿತು.ಕೈಜಾರಿ ಒಡೆದ ಕಾರಣ ಪಿಂಗಾಣಿ ತಟ್ಟೆಯ ಬದಲಿಗೆ ಮರದ ತಟ್ಟೆ,ಮರದ ಚಮಚವನ್ನೂ ಕೊಟ್ಟರು.ಕುಟುಂಬದವರೆಲ್ಲಾ ಒಟ್ಟಿಗೆ ಸಂತೋಷದಿ ಉಣ್ಣಲು ಮುದುಕ ಮಾತ್ರ ಬೇಸರದಿಂದ ಒಂಟಿಯಾಗಿ ಮೂಲೆಯಲ್ಲಿ ಕುಳಿತು ಒಲ್ಲದ ಮನಸ್ಸಿನಲ್ಲಿ ಊಟ ಮಾಡುತ್ತಿದ್ದನು.ಅವನು ಊಟ ಮಾಡಿದ ಮೇಲೆ ಆ ಜಾಗವನ್ನು ಸ್ವಚ್ಚ ಮಾಡುವಾಗ ತಟ್ಟೆಯ ಸುತ್ತಲೂ ಚೆಲ್ಲಿದ್ದಕ್ಕಾಗಿ ಬೈಗುಳ ಕೇಳಬೇಕಾಗಿತ್ತು. ಇವೆಲ್ಲವನ್ನೂ ಅದೇ ಮನೆಯಲ್ಲೇ ಇದ್ದು ಗಮನಿಸುತ್ತಿದ್ದ ಮುದುಕನ ಮೊಮ್ಮಗ ನಾಲ್ಕು ವರ್ಷದ ಬಾಲಕ.ಅವನು ಆಟವಾಡುವಾಗ ಒಮ್ಮೆ ಮರದ ಹಲಗೆಗಳನ್ನು ಗರಗಸದಿಂದ ಕತ್ತರಿಸಲು ಪ್ರಯತ್ನ ಮಾಡುತ್ತಿದ್ದ.ಹರಿತವಾದ ಹಲ್ಲುಗಳಿದ್ದ ಗರಗಸ ಮಗನ ಕೈಗೆ ತಗುಲಿತೆಂದು ಅವನ ತಂದೆ ಮೆಲ್ಲನೆ ಅದನ್ನು ಕಸಿದುಕೊಂಡು"ಮಗೂ ಏನು ಮಾಡ್ತಿದ್ದೀಯಪ್ಪಾ?"ಎಂದು ಕೇಳಿದ.ಅದಕ್ಕೆ ಪುಟ್ಟ ಬಾಲಕ "ಅಪ್ಪಾ ಮರದಲ್ಲಿ ಎರಡು ತಟ್ಟೆ,ಚಮಚ ಮಾಡ್ತಿದ್ದೇನೆ ಮುಂದೆ ನಿಮಗೆ ಬೇಕಾಗಬಹುದಲ್ಲವೇ" ಅಂದ.ಆತನ ತಂದೆ ತಾಯಿ ಈ ಮಾತನ್ನು ಕೇಳಿ ದಂಗಾದರು,ತಾವು ಮಾಡಿದ ತಪ್ಪು ಅರಿವಾಯಿತು.ಮರುದಿನವೇ ಮುದುಕನಿಗೂ ಒಂದೇ ಮೇಜಿನ ಮೇಲೆ ಊಟ ಬಡಿಸಲಾಯಿತು.ಎಲ್ಲರೂ ಕೂಡಿ ಸಂತೋಷದಿಂದ ಉಂಡು ಬಾಳಿದರು.
ನೀತಿ: ಮಕ್ಕಳ ಮನಸ್ಸು ಬಲು ಸೂಕ್ಷ್ಮ, ಮಕ್ಕಳಿಂದ ಒಮ್ಮೊಮ್ಮೆ ಹಿರಿಯರೂ ಕಲಿಯುವುದಿದೆ.