ನಾಯಕ

ದೂರದ ಬೆಟ್ಟದ ಬುಡದಲ್ಲಿ ಪುಟ್ಟ ಜಲಪಾತ ಒಂದಿತ್ತು.ಅದರ ಪಕ್ಕದಲ್ಲೇ ಒಂದು ಒಂದು ದೊಡ್ಡ ಮಾವಿನ ಹಣ್ಣಿನ ಮರವಿತ್ತು.ಅದರಲ್ಲಿ ಕೆಲವು ಮಂಗಗಳೂ ವಾಸವಾಗಿದ್ದವು.ರುಚಿಯಾದ ಹಣ್ಣನ್ನು ಸವಿಯುತ್ತಾ ಸಂತಸದಿಂದಿದ್ದವು.ಆ ಗುಂಪಿನ ನಾಯಕನೆನಿಸಿದ ಮಂಗವು ಆ ಮರವನ್ನು ಸುರಕ್ಷಿತವಾಗಿ ಬೇರೆ ಪ್ರಾಣಿ ಪಕ್ಷಿಗಳು ಹತ್ತಿರ ಬಾರದಂತೆ ನೋಡಿಕೊಂಡಿತ್ತು.
ಒಂದುದಿನ ಜೋರಾಗಿ ಗಾಳಿ ಬೀಸಿದ ಕಾರಣ ಒಂದು ಹಣ್ಣು ಮರದಿಂದ ಕಳಚಿ ನೀರಿನಲ್ಲಿ ಬಿದ್ದಿತು.ನೀರು ಹರಿಯುತ್ತಾ ಹರಿಯುತ್ತಾ ರಾಜನ ಅರಮನೆಯ ಈಜುವ ಕೊಳಕ್ಕೆ ಸೇರುವ ವ್ಯವಸ್ಥೆ ಮಾಡಲಾಗಿತ್ತು.ರಾಜ ರಾಣಿಯರು ಆ ಕೊಳದಲ್ಲಿ ಈ ಜುತ್ತಿರಲು ಅಲ್ಲಿಗೆ ಈ ಹಣ್ಣು ತೇಲುತ್ತಾ ಬಂದಿತು.ರಾಣಿ ಅದರ ಪರಿಮಳವನ್ನು ಕಂಡು ಕಚ್ಚಿ ರುಚಿ ನೋಡಿದಳು.ಬಹಳ ಸೊಗಸಾಗಿದ್ದ ಈ ಹಣ್ಣು ಬಿಡುವ ಮರವನ್ನು ಹುಡುಕಿಕೊಂಡು ರಾಜನು ಹೊರಟನು.ದೂರದ ಬೆಟ್ಟದ ಬಳಿ ಮರ ಕಂಡಿತು.ಆದರೆ ಮರದ ಬಳಿಗೆ ಹೋದಾಗ ಮಂಗಗಳು ಕೋಪದಿಂದ ಕಿರುಚಿ,ಅರಚಿ,ಕಚ್ಚಲು ಬಂದವು.ರಾಜನು ತನ್ನ ಬಿಲ್ಲಿನಿಂದ ಬಾಣಗಳನ್ನು ಬಿಟ್ಟು ಮಂಗಗಳನ್ನು ಕೊಲ್ಲಲು ನೋಡಿದನು.ಅವುಗಳ ಒಡೆಯ ಎನಿಸಿದ ಕೋತಿಯು ಮರದ ತುದಿಗೆ ಹೋಗಿ ತನ್ನ ಕಾಲು ಚಾಚಿ ಪಕ್ಕದಲ್ಲಿದ್ದ ಬೆಟ್ಟ ಹಿಡಿದು ಉಳಿದ ಕಪಿಗಳು ಮರದಿಂದ ಬೆಟ್ಟಕ್ಕೆ ಹಾರಲು ಸೇತುವೆಯಾಯಿತು.ಆದರೆ ರಾಜನ ಬಾಣಗಲು ತಗುಲಿದರೂ ಎಲ್ಲ ಮಂಗಗಳು ಸುರಕ್ಷಿತ ಸ್ಥಳಕ್ಕೆ ಹೊರಡುವ ವರೆಗೂ ಗಟ್ಟಿಯಾಗಿ ನಿಂತು ಕಡೆಗೆ ಮೇಲಿಂದ ಉರುಳಿತು. ಇದನ್ನು ಕಂಡ ರಾಜನು ಅದರ ಶೌರ್ಯವನ್ನು ಮೆಚ್ಚಿದನು.ಅಸಹಾಯಕತೆಯಿಂದ ಬಿದ್ದ ಕೋಚಿಯನ್ನು ಕೊಲ್ಲದೆ ಅದನ್ನು ಉಪಚರಿಸಿ,ಹಣ್ಣನ್ನು ಕಿತ್ತದೇ ಹಿಂದಕ್ಕೆ ಹೊರಟನು.ಕಪಿಗಳು ರಾಜನ ಕರುಣೆಯನ್ನು ಕಂಡು ಕೆಲವು ಹಣ್ಣುಗಳನ್ನು ಕೊಟ್ಟವು.ಅದನ್ನು ಪಡೆದು,ಅರಮನೆಗೆ ತೆರಳಿ ಎಲ್ಲರಿಗೂ ಆ ಮಂಗಗಳ ನಾಯಕನ ಸಾಹಸ, ಧೈರ್ಯ,ಪರೋಪಕಾರದ ವಿಷಯ ತಿಳಿಸಿದನು.ತಂದ ಹಣ್ಣುಗಳನ್ನು ತಿಂದು ಬೀಜವನ್ನು ನೆಟ್ಟು ವರುಶಗಳ ನಂತರ ರುಚಿಕರ ಹಣ್ಣನ್ನೂ ಪಡೆದರು