ಸಾಕ್ಷಿ

ಬಡ ರೈತನೊಬ್ಬ ತನ್ನ ಜಮೀನು ಬಿತ್ತಲು ಬೀಜ ಗೊಬ್ಬರ ಕೊಳ್ಳಲು ಹಣವಿಲ್ಲದೆ ಊರಿನ ಸಾಹುಕಾರನ ಬಳಿ ಒಂದು ಸಾವಿರ ರೂಪಾಯಿಯನ್ನು ಸಾಲವಾಗಿ ಪಡೆದನು.ಮಳೆಗಾಲಕ್ಕೆ ಮುನ್ನ ನೆಲವನ್ನು ಉತ್ತು ಆ ಹಣದಲ್ಲಿ ತಂದ ಬೀಜ ಬಿತ್ತು ಒಳ್ಳೆಯ ಫಲ ಪಡೆದು ತನ್ನ ಕುಟುಂಬಕ್ಕೆ ಆಗುವಷ್ಟು ಇಟ್ಟುಕೊಂಡು ಉಳಿದ್ದನ್ನು ಮಾರಿದ ಬಳಿಕ ಸಾಹುಕಾರನ ಹಣವನ್ನೂ ಬಡ್ಡಿ ಸಮೇತವಾಗಿ ಹಿಂತಿರುಗಿಸಲು ಬಂದನು.ಸಾಹುಕಾರನು ತನ್ನ ಮನೆಯ ಅಂಗಳದ ಕಾರಂಜಿಯ ಮೇಲೆ ಕುಳಿತಿದ್ದ ಅಪರೂಪದ ಒಂದು ಬಣ್ಣಬಣ್ಣದ ಪುಟ್ಟ ಪಕ್ಷಿಯನ್ನು ನೋಡುತ್ತಾ ಕುಳಿತಿದ್ದನು.ರೈತನೂ ಅದನ್ನು ಕಣ್ತುಂಬ ನೋಡಿ ಅನಂದ ಪಟ್ಟು ಹಣವನ್ನು ಹಿಂತಿರುಗಿಸಿ ಕೊಟ್ಟು ಹೊರಟುಹೋದನು.
ಸ್ವಲ್ಪ ಕಾಲದ ಬಳಿಕ ಸಾಹುಕಾರನು ಕೆಟ್ಟ ಯೋಜನೆ ಮಾಡಿ ಮತ್ತೆ ರೈತನಿಗೆ ತಾನು ಕೊಟ್ಟ ಹಣ ಕೊಡು ಎಂದ.ಬಡ ರೈತನು ಇದನ್ನು ಕೇಳಿ ಗಾಬರಿಗೊಂಡನು.ಇಬ್ಬರಿಗೂ ವಾದಕ್ಕಿಳಿಯಿತು.ನ್ಯಾಯ ಕೇಳಲು ಊರ ಪಟೇಲನ ಬಳಿ ಹೋದರು.ರೈತ ಸಾಹುಕಾರನ ಬಳಿ ಪಡೆದ ಹಣವನ್ನು ಕೆಲ ದಿನಗಳ ಹಿಂದೆಯೇ ಹಿಂದಿರುಗಿಸಿದ ವಿಷಯ ತಿಳಿಸಿದ.ಸಾಹುಕಾರ ಇದನ್ನು ಸುಳ್ಳು ಎಂದು ವಾದ ಮಾಡಿದ.ಹಣ ಪಡೆದ ನಂತರ ರೈತನು ತನ್ನ ಮನೆಯ ಕಡೆಯೇ ತಿರುಗಿ ಬಂದಿಲ್ಲ ಎಂದ.ರೈತ ತಾನು ಬಂದ ದಿನ ವೇಳೆಯನ್ನು ತಿಳಿಸಿದ, ಆದರೂ ಸಾಹುಕಾರ ತನ್ನ ಹಟ ಬಿಡಲೇ ಇಲ್ಲ.ರೈತ ತಾನು ಬಂದಾಗ ಸಾಹುಕಾರನು ಮನೆಯ ಅಂಗಳದಲ್ಲಿ ಇದ್ದನೆಂದೂ , ಆತನ ಹೆಗಲ ಮೇಲೆ ಒಂದು ಸುಂದರ ಪಕ್ಷಿ ಕುಳಿತಿತ್ತು ಎಂದೂ ಹೇಳಿದ.ತಕ್ಷಣ ಸಾಹುಕಾರನು "ಸುಳ್ಳು ಪಕ್ಷಿ ನನ್ನ ಹೆಗಲ ಮೇಲೆ ಕುಳಿತಿರಲಿಲ್ಲ,ಅದು ಕಾರಂಜಿಯ ಮೇಲೆ ಇತ್ತು"ಎಂದ.ಕೂಡಲೇ ಸತ್ಯವನ್ನು ಅರಿತ ಪಟೇಲ ಸಾಹುಕಾರನಿಗೆ ನೂರು ರೂಪಯಿ ದಂಡ ವಿಧಿಸಿ ಕ್ಷಮೆ ಯಾಚಿಸಲು ಹೇಳಿದ.