ಮುಠ್ಠಾಳ ?

ವಿಜಯನಗರದ ರಾಜ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನ್ನಾಲಿರಾಮಕೃಷ್ಣನೆಂಬ ಪಂಡಿತ ಇದ್ದನು. ಆತನು ವಿದ್ಯಾವಂತನೂ, ಚತುರನೂ, ಜೊತೆಗೆ ಸಮಯಸ್ಪೂರ್ತಿಯನ್ನು ಹೊಂದಿದ್ದವನೂ ಆಗಿದ್ದನು.ಒಮ್ಮೆ ರಾಜನಿಗೆ ದೂರದ ಊರಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಬಂದು ಐನೂರು ಕುದುರೆಗಳನ್ನು ಕೊಡುವುದಾಗಿ ಹೇಳಿ ಐದು ಸಾವಿರ ನಾಣ್ಯಗಳನ್ನು ರಾಜನಿಂದ ಪಡೆದು ಹೊರಟು ಹೋದನು.
ಒಂದೆರೆಡು ದಿನಗಳ ಬಳಿಕ ರಾಜನು ತೆನ್ನಾಲಿಯನ್ನು ನೋಡಲು ಅವನ ಮನೆಕಡೆಗೆ ಹೊರಟನು.ತೆನ್ನಾಲಿ ರಾಮನು ಬಹಳ ಯೋಚಿಸುತ್ತಾ ಏನನ್ನೋ ಬರೆಯುತ್ತಿದ್ದನು.ಅದನ್ನು ಕಂಡು ರಾಜನು "ರಾಮಕೃಷ್ಣ ಅಷ್ಟೊಂದು ಆಳವಾಗಿ ಯೋಚಿಸುತ್ತಾ ಏನನ್ನು ಬರೆಯುತ್ತಿರುವೆ?" ಎಂದು ಕೇಳಿದನು.ಅದಕ್ಕೆ ಉತ್ತರವಾಗಿ"ಏನೂ ಇಲ್ಲ್ಲಾ ಸ್ವಾಮೀ ನಮ್ಮ ರಾಜ್ಯದಲ್ಲಿ ಎಷ್ಟು ಮುಠ್ಠಾಳರಿದ್ದರೆ ಎಂದು ಪಟ್ಟಿ ಮಾಡುತ್ತಿದ್ದೇನೆ" ಎಂದ. "ಹಾಗಾದರೆ, ನಾನು ಈ ರಾಜ್ಯದ ರಾಜ ನನಗೂ ಆ ಪಟ್ಟಿ ನೋಡುವ ಹಕ್ಕಿದೆ" ಎಂದು ಹೇಳಿ ಪಟ್ಟಿಯನ್ನು ಪಡೆದು ಹೆಸರುಗಳನ್ನು ಓದಲು ಹೊರಟ. ಆದರೆ ಆ ಪಟ್ಟಿಯಲ್ಲಿ ಮೊದಲ ಹೆಸರೇ "ಶ್ರೀ ಕೃಷ್ಣದೇವರಾಯ" ಎಂದಿತ್ತು.ರಾಜನಿಗೆ ಕೋಪ ಬಂದು ಸಿಟ್ಟಿನಿಂದ ಕಾರಣ ಕೇಳಿದನು.ತೆನ್ನಾಲಿ ರಾಮಕೃಷ್ಣನು ಶಾಂತಿಯಿಂದ "ಅಲ್ಲಾ ಸ್ವಾಮಿ ಯಾರಾದರೂ ಅಪರಿಚಿತರಿಗೆ ಐದು ಸಾವಿರ ನಾಣ್ಯ ಕೊಟ್ಟು ಅವನು ತಿರುಗಿ ಬರುತ್ತಾನೆಂದರೆ ಅವರಿಗಿಂತ ಪೆದ್ದರಿನ್ನಾರಿದ್ದರೆ ಸ್ವಾಮೀ?" ಎಂದ. ತಕ್ಷಣ ರಾಜನು "ಅಕಸ್ಮಾತ್ ಅವನು ತಿರುಗಿ ಬಂದು ಕುದುರೆಗಳನ್ನೂ ತಂದರೆ ?". ಅರೆರೆ! ಹಾಗಾದರೆ ಇನ್ಯಾವ ಶಿಕ್ಷೆ ಕಾದಿದೆಯೋ ನನಗೆ ಎಂದು ಕೂಡಲೇ ಜಾಣತನದಿಂದ ತೆನ್ನಾಲಿ ಉತ್ತರಿಸಿದ"ಅವನೇನಾದರೂ ವಾಪಸ್ ಬಂದರೆ ನಿಮ್ಮ ಹೆಸರನ್ನು ತೆಗೆದು ಅವನ ಹೆಸರನ್ನು ಅಲ್ಲಿ ಹಾಕಿಬಿಡುತ್ತೇನೆ ಸ್ವಾಮಿ" ಎಂದಾಗ ಇಬ್ಬರಿಗೂ ನಗೆಬುಗ್ಗೆ ಉಕ್ಕಿ ಗೊಳ್ಳನೆ ನಕ್ಕರು.