ನಂಬಿಕೆ

"ಅನನ್ಯಾಶ್ಚಿಂತಯಂ ತೋಮಾಂ ತೇ ಜನ ಪರ್ಯುಪಾಸತೆ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ||"
ಈ ಶ್ಲೋಕ ನಾವು ಚಿಕ್ಕವರಾಗಿದ್ದಾಗ ಬೆಸಿಗೆಯ ರಜೆಯಲ್ಲಿ ನನ್ನ ತಾಯಿಯ ತವರೂರಿಗೆ ಹೋದಾಗ ಬಲವಂತವಾಗಿ ಬಾಯಿಪಾಠ ಮಾಡಿ ಕಲಿತದ್ದು. ಆ ಹಳ್ಳಿಯಲ್ಲಿ ನನ್ನ ತಾತನವರು ದೇವಸ್ಥಾನದ ಸಂಜೆ ಪೂಜೆ ಮುಗಿಸಿ ಮನೆಗೆ ಬಂದು ರಾತ್ರಿಯೂಟದ ನಂತರ ತಾವು ಮಲಗುವ ಮೊದಲು ಪುಟ್ಟ ಕಥೆಯೊಂದನ್ನು ಜೊತೆಗೂಡಿಸಿ ಭಗವದ್ಗೀತೆಯ ಯಾವುದಾದರೂ ಶ್ಲೋಕ ಹೇಳುತ್ತಿದ್ದರು.ಗೀತೆಯ ೯ನೇ ಅಧ್ಯಾಯದ ೨೨ನೇ ಶ್ಲೋಕ ಇದಾಗಿದ್ದು "ಯಾರು ನನ್ನಲ್ಲಿ ನಿಸ್ವಾರ್ಥ ಹಾಗೂ ನಿಷ್ಕಳಂಕ ಭಕ್ತಿ ತೋರುವರೋ ಅಂತಹ ಜನರ ಯೋಗಕ್ಷೇಮ ಜವಾಬ್ದಾರಿ ನನ್ನದು"-ಶ್ರೀಕೃಷ್ಣ ಹೇಳಿದ ಗೀತೆಯ ಸಾರದ ಸರಳ ಅರ್ಥವಿದು.ಜ್ಞಾನಿಗಳು ಇನ್ನೂ ಉತ್ಕೃಷ್ಟ ಅರ್ಥ ಕೊಡಬಲ್ಲರು ಇದಕ್ಕೆ. ಅಂದು ಈ ಶ್ಲೋಕದ ಜೊತೆ ಕೇಳಿದ ಕಥೆ ಇಂದಿಗೂ ಮರೆಯಲಸಾಧ್ಯ. ಕಥೆ ಹೀಗಿತ್ತು.......
ಗುರುಕುಲ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಯೋಗಾಚಾರ್ಯ ಎಂಬ ಒಬ್ಬ ಸಂಸಾರಿ ತನ್ನ ಊರಿನ ಪುರೋಹಿತನೂ ಆಗಿದ್ದನು. ಆತನು ತನ್ನ ಶಿಷ್ಯರಿಗೆ ವೇದಪಾಠ,ಪುರಾಣ ಕಥೆಗಳು,ಗೀತೆಯ ಉಪದೇಶ ಎಲ್ಲಾ ಜ್ಞಾನಧಾರೆ ಎರೆಯುವುದಲ್ಲದೇ ಅವರ ಊಟ ಉಪಚಾರವನ್ನೂ ನೋಡಿಕೊಳ್ಳುತ್ತಿದ್ದನು.ಆತನಿಗೂ"ಯೋಗಕ್ಷೇಮಂ ವಹಾಮ್ಯಹಂ"ಶ್ಲೋಕವೆಂದರೆ ಅದೇನೋ ಹೆಚ್ಚು ಒಲವು - ಆಸಕ್ತಿ. ಏನಾಯಿತೋ ಏನೋ ಒಮ್ಮೆ ಆತನ ಮನೆಯಲ್ಲಿ ಬಡತನದ ಬಿಸಿ ತಾಗಿ ಒಪ್ಪೊತ್ತಿನ ಊಟ ದಕ್ಕಿಸುವುದೇ ಕಷ್ಟವಾಗಿಹೋಯಿತು. ಗುರುಕುಲಕ್ಕೆ ಬರುವವರು ಇಲ್ಲದಂತಾಯಿತು,ಹಸಿದ ಮಕ್ಕಳು, ಕಡುಬಡತನ, ಅಂಗಡಿಯವನ ಬಳಿ ಸಾಲ ಕೇಳುವುದಿಲ್ಲ ಎಂಬುವ ಸ್ವಾಭಿಮಾನ, ಹೀಗೇ ನೋವು ನುಂಗುತ್ತಾ ತನ್ನ ಕೋಣೆಯಲ್ಲಿ ಬಂದು "ಅಯ್ಯೋ ಒಂದು ಹೊತ್ತಿನ ಊಟವನ್ನೂ ತನ್ನ ಮಡದಿ ಮಕ್ಕಳಿಗೆ ಕೊಡಲಾಗಲಿಲ್ಲವೇ" ಎಂದು ಒಮ್ಮೆ ಆ ದೇವರನ್ನು ಶಪಿಸಿ ತೆರೆದಿಟ್ಟ ಗೀತೆಯ ಪುಸ್ತಕದ ಮೇಲೆ ತನ್ನ ಪ್ರಿಯವಾದ ಶ್ಲೋಕ ಎದ್ದು ಕಾಣುತ್ತಿದ್ದುದನ್ನು ಕಂಡ. ಒಣಗಿದ ಬಾಯಿಯಲ್ಲಿ ಎಂಜಲು ನುಂಗುತ್ತ ಕೋಪದಿಂದ ಅಲ್ಲೇ ಇದ್ದ ಲೇಖನಿಯಿಂದ ಆ ಶ್ಲೋಕದ ಮೇಲೆ ಬಲವಾಗಿ ಎರಡುಬಾರಿ ಗೀಚಿಬಿಡುತ್ತಾನೆ. ನಂಬಿಕೆ ಕಳೆದುಕೊಂಡು ದಿಕ್ಕೆಟ್ಟು ಮನೆಬಿಟ್ಟು ದೂರನಡೆದು ಒಂದು ದೇಗುಲದ ಬಳಿ ಬರುತ್ತಾನೆ.ಆರತಿಯ ಘಂಟೆ ಆಲಿಸಿದರೂ ಒಳಗೆ ಹೋಗಲೂ ಇಚ್ಚಿಸದೆ ಹೊರಾಂಗಣದ ಕಂಬಕ್ಕೆ ಒರಗಿ ಕುಸಿದು ಕುಳಿತುಕೊಳ್ಳುತ್ತಾನೆ.ದಣಿದ ಮೈ ಹಸಿದ ಹೊಟ್ಟೆ ಕುಳಿತಲ್ಲೆ ನಿದ್ದೆ ಬರುತ್ತದೆ. ಕಣ್ಬಿಟ್ಟು ನೋಡಲು ಸಂಜೆಯಾಗುತ್ತಿದೆ! ಮೈಕೊಡವಿ ದಡದಡನೆ ಮನೆಕಡೆಗೆ ಹೆಜ್ಜೆಹಾಕಲು ಎಲ್ಲರೂ ಈತನ ಬರುವಿಕೆಗೆ ಕಾದಿರುತ್ತಾರೆ.ಆತನ ಹೆಂಡತಿ "ಸ್ವಾಮೀ ತಾವೆಲ್ಲಿ ಹೋಗಿದ್ದಿರಿ? ಮಕ್ಕಳು ನಿಮಗಾಗಿ ಕಾದು ಕಾದು ಸಾಕಾಗಿ ಊಟ ಮಾಡಿದರು, ಬನ್ನಿ ನಾವು ಊಟ ಮಾಡೋಣ"ಎಂದಳು. ಆತನಿಗೆ ಆಶ್ಚರ್ಯ! "ಅರೆ ಅಡುಗೆ? ದಿನಸಿ?ತರಕಾರಿ? ಎಲ್ಲಾ ಎಲ್ಲಿಂದ ಬಂದುವು?" ಎಂದು ಕೇಳಿದನು. ಅದಕ್ಕೆ ಆಕೆ "ಅರೆ ಇದೇನು ಹೀಗೆ ಕೇಳುತ್ತಿದ್ದೀರಿ, ತಾವೇ ಅಂಗಡಿಯ ಹುಡುಗನಿಗೆ ಪಟ್ಟಿ ಕೊಟ್ಟಿದ್ದಿರಿ,ಆತ ಬಂದು ಕೊಟ್ಟು ಹೋದ.ಅಲ್ಲಾ ತಾವೆಷ್ಟು ಒಳ್ಳೆಯತನಕ್ಕೆ ಹೆಸರು ಮಾಡಿದವರು ಹೀಗೆ ಮಾಡಬಹುದಾ?ಅಲ್ಲಾ ಆ ಹುಡುಗ ಮಾತನಾಡದ ಹಾಗೆ ಮಾಡಿದ್ದೀರಲ್ಲಾ.....ಆತ ತನ್ನ ನಾಲಿಗೆ ತೋರಿಸಿದ, ಅದೆಷ್ಟು ಬಲವಾಗಿ ಆತನ ನಾಲಿಗೆಯ ಮೇಲೆ ಗೀಚಿದ್ದೀರಾ! ಎರಡು ಗೆರೆಗಳು, ಪಾಪ ರಕ್ತ ಸೋರುತ್ತಿತ್ತು. ಆತ ಕಷ್ಟಪಟ್ಟು ಒಂದು ಮಾತು ಹೇಳಿ ಹೋದ". ಆಚಾರ್ಯರು ಧಡಾರನೆ ಕಣ್ಣರಳಿಸಿ "ಏನಂದಾ?" ಎಂದರು. "ಈ ಸಲ ತಡವಾಗಿ ದಿನಸಿ ಒದಗಿಸಿಕೊಟ್ಟಿದ್ದಕ್ಕೆ ಕ್ಷಮೆಯಿರಲಿ ಮತ್ತೆಂದೂ ತಡ ಮಾಡಲಾರೆ"ಎಂದ. ಆ ಮಾತುಗಳನ್ನು ಕೇಳಿದ ಯೋಗಾಚಾರ್ಯರಿಗೆ ತಮ್ಮ ತಪ್ಪಿನ ಅರಿವಾಯಿತು,ಕಣ್ಣುಗಳಲ್ಲಿ ನೀರು ಉಕ್ಕಿ ಬಂದಿತು. ಜೀವನದಲ್ಲಿ ಕಷ್ಟಬರಲು ಭಗವಂತನಲ್ಲಿದ್ದ ನಂಬಿಕೆ ಕಳೆದುಕೊಂಡಿದ್ದಕ್ಕೆ ಬಹಳ ವ್ಯಥೆಯಾಯಿತು.
ಪ್ರಸ್ತುತದಲ್ಲಿ ಸಾಮಾನ್ಯರು ನಾವು ಇದೇರೀತಿ ಸುಖಬಂದಾಗಲೂ ನಂಬಿಕೆಯನ್ನೇ ಕಳೆದುಕೊಳ್ಳುತ್ತೇವೆ ಅಲ್ಲವೇ? ಸುಖಸಂತೋಷದ ಪರಮಾವಧಿಯಲ್ಲಿದ್ದಾಗ "ಏ ಎಲ್ಲಾ ನನ್ನ ಸಂಪಾದನೆ, ಪರಿಶ್ರಮದ ಫಲ, ಅವನದೇನಿದೆ?" ಎನ್ನುವುದೂ ಉಂಟು.
೧೯೨೨ರಲ್ಲಿ structure of atoms ಗಾಗಿ Niels Bohr ಎಂಬಾತನಿಗೆ ನೋಬಲ್ ಪ್ರಶಸ್ತಿ ದೊರಕಿದಾಗ್ಗಿನಿಂದಾ ಹಿಡಿದು ಇತ್ತೀಚಿನ "ಕ್ವಾರ್ಕ್"ಕಂಡುಹಿಡಿಯುವವರೆಗೂ ಸಂಶೋಧನೆ ನಿರಂತರ ಸಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಸತ್ಯದ ಶೋಧನೆಗೂ ನೋಬಲ್ ನೀಡಲಾಗುತ್ತಿದೆ. ಪ್ರಪಂಚದ ಎಲ್ಲ ಜೀವ ನಿರ್ಜೀವ ವಸ್ತುಗಳೂ ಕ್ವಾರ್ಕ್ ನಿಂದಾಗಿ ಮಾಡಲ್ಪಟ್ಟಿವೆ,ಹಾಗಿದ್ದಲ್ಲಿ ಕಾಣದ ಶಕ್ತಿಯೊಂದು ಅವುಗಳನ್ನು ಒಂದಾಗಿಟ್ಟಿವೆ ಚಲನ, ಮಾತು, ಬುದ್ದಿ, ಜ್ಞಾನ, ಅವುಗಳಲ್ಲಿ ಹೊಕ್ಕುವಂತೆ ಮಾಡಿದೆ ಅಲ್ಲವೇ? ಅದನ್ನೇ ದಯೆಯಿಂದ "ದೇವರು" ಅಥವಾ ಭಕ್ತಿಯಿಂದ "ಭಗವಂತ" ಎಂದು ಕರೆದರೆ ತಪ್ಪಿಲ್ಲ. ಆದರೆ ಅವನ ಕೃಪೆಗೆ ಕೃತಜ್ಞತೆಯಿಲ್ಲದೆ, ಲೀಲೆಯನ್ನು ಲೆಕ್ಕಿಸದೆ, ಮಹಿಮೆಯನ್ನು ಮರೆತು, ಮೆರೆದು ಮೈಮರೆತು ಮೋಜಿನಿಂದ ಕಾಲ ಕಳೆದರೆ ಏನಾಗಬಹುದು? ಅನ್ನುವುದಕ್ಕೆ ನಿದರ್ಶನಕ್ಕಾಗಿ ಶ್ರೀ ಗುರುರಾಜ ಖರ್ಜಗಿಯವರ ಪ್ರಜಾವಾಣಿಯಲ್ಲಿ ಬರುತ್ತಿದ್ದ ಆಕರ್ಶಕ ಪುಟ್ಟ ಕಥೆಗಳಿಂದಾಯ್ದ ಈ ಉದಾಹರಣೆ ಕಥೆ ಸಾಕು.
ಕಾಶಿಯಲ್ಲಿ ಹಿಂದೊಮ್ಮೆ ಮಕ್ಕಳಿಲ್ಲದ ರಾಜನೊಬ್ಬ ತನ್ನಕಡೆಗಾಲದಲ್ಲಿ ಒಂದು ಶಾಸನ ರಚಿಸಿ ಕಡೆಯುಸಿರೆಳೆದ.ಅದರಂತೆ ಊರಿನ ಮುಂದಿರುವ ದೊಡ್ಡ ಘಂಟೆಯನ್ನು ಬಾರಿಸಿದವರನ್ನು ಎರಡು ವರ್ಷ ಅಲ್ಲಿನ ರಾಜನನ್ನಾಗಿ ಮಾಡಲಾಗುತ್ತದೆ,ಎರಡು ವರ್ಷ ರಾಜ್ಯಭಾರ ಮಾಡಿದ ತರುವಾಯ ಅವರನ್ನು ಗಂಗೆಯ ಉತ್ತರ ದಂಡೆಯ ಕಾಡಿನೊಳಕ್ಕೆ ಬಿಟ್ಟು ಬರಲಾಗುತ್ತದೆ.ಅಲ್ಲಿ ಕ್ರೂರ ಪ್ರಾಣಿಗಳು ಅವರನ್ನು ಬಗೆದು ತಿಂದು ಬಿಡಬೇಕು. ವಿಷಯ ಹೀಗಿದ್ದರೂ ಮಾಮೂಲು ಬೇಸರದ ಜೀವನ ಬೇಡವೆನಿಸಿದವರು ಕೆಲವರು ಘಂಟೆ ಬಾರಿಸಿ ಇರುವಷ್ಟು ದಿನ ರಾಜ್ಯದ ಭೋಗ ಭಾಗ್ಯ ಅನುಭವಿಸಿ ಕಾಡಿಗೆ ಹೋಗುತ್ತಿದ್ದರು.ಕೆಲ ಕಾಲದ ನಂತರ ಆ ಊರಿನ ಭಿಕ್ಷುಕನೊಬ್ಬ ಘಂಟೆ ಬಾರಿಸಿದ.ಆತ ಅಪಾರ ದೈವ ಭಕ್ತನೂ ಆಗಿದ್ದ. ಸುದ್ದಿ ರಾಜ್ಯದ ಅಧಿಕಾರಿಗಳಿಗೆ ತಿಳಿದು ಆತನನ್ನು "ಏನಯ್ಯಾ ಘಂಟೆ ಬಾರಿಸಿಬಿಟ್ಟೆಯಲ್ಲಾ ಇದರ ಪರಿಣಾಮ ಏನು ಗೊತ್ತಾ?"ಎಂದರು. ಭಿಕ್ಷುಕ "ಗೊತ್ತು"ಎಂದು ಧೈರ್ಯವಾಗಿ ಉತ್ತರಿಸಿದ. ಸರಿ ಇನ್ನೇನು ಮಾಡುವುದು ಅವನನ್ನು ಕರೆದೊಯ್ದು ಅಭ್ಯಂಜನ ಮಾಡಿಸಿ ಮರುದಿನವೇ ರಾಜನನ್ನಾಗಿ ಪಟ್ಟಾಭಿಶೇಕ ಮಾಡಿದರು. ಕೆಲವರಿಗೆ ನಗು, ಕೆಲವರಿಗೆ ಅಸೂಯೆ ಇನ್ಕೆಲವರಿಗೆ ರಾಜ್ಯದ ಸ್ಥಿತಿ ಹೀಗಾಯಿತಲ್ಲಾ ಎನ್ನುವ ಚಿಂತೆ.ಆದರೆ ಭಿಕ್ಷುಕ ಎಲ್ಲರಂತೆ ಮಹಲಿನಲ್ಲಿ ಕುಳಿತು ಮಧ್ಯಪಾನ ಮಾಡಲಿಲ್ಲ, ನಳಿನೆಯರ ನೃತ್ಯ ನೋಡಲಿಲ್ಲ, ಮೋಜು ಮಸ್ತಿ ಮಾಡಲಿಲ್ಲ. ಆಶ್ಚರ್ಯವೆಂದರೆ ಒಂದು ದಿನವೂ ಸಿಂಹಾಸನದ ಮೇಲೆ ಕುಳಿತು ದರ್ಬಾರು ನಡೆಸಲಿಲ್ಲ. ಅವನ ಪರಿಯೇ ಯಾರಿಗೂ ತಿಳಿಯುತ್ತಿರಲಿಲ್ಲ. ನಾನು ಊರ ಪ್ರದಕ್ಷಿಣೆಗೆ ಹೋಗಬೇಕು,ದೇವಸ್ಥಾನಕ್ಕೆ ಹೋಗಬೇಕು ಎಂದು ಏನಾದರೊಂದು ನೆಪಮಾಡಿ ಹೊರಟು ಬಿಡುತ್ತಿದ್ದ. ಹೀಗೇ ನಡೆದು ಎರಡುವರ್ಷ ಕಳೆಯುತ್ತಾ ಬಂದಿತು. ಅವಧಿ ಮುಗಿಯುತ್ತಿರಲು ಅವನಲ್ಲಿ ಹಿಂದಿದ್ದ ರಾಜರಂತೆ ಯಾವ ಆತಂಕವೂ ಕಾಣುತ್ತಿರಲಿಲ್ಲ.ಅಧಿಕಾರಿಗಳು ಅವನ ಅವಧಿ ಕೊನೆಕೊನೆಗೆ ಬರುತ್ತಿದ್ದಂತೆ ಎಚ್ಚರವಿತ್ತರು. ಅದಕ್ಕವನು "ಹೌದು ನನಗೆ ಗೊತ್ತಿದೆ" ಎಂದು ಮುಂದೆ ನಡೆದ. ಕಾಲ ಕಳೆದು ಆ ದಿನ ಬಂದೇ ಬಿಟ್ಟಿತು. ಅವನನ್ನು ದೋಣಿಯೊಂದರಲ್ಲಿ ಕುಳ್ಳರಿಸಿ ಉತ್ತರದ ದಡದ ಕಡೆಗೆ ಒಯ್ದರು.ಅವನಲ್ಲಿ ಭಯ ಆತಂಕವಿರಲಿಲ್ಲ ಅದರ ಬದಲು ಮುಗುಳ್ನಗೆ! ಪ್ರಶಾಂತ ನಗು! ಅವನನ್ನು ಕರೆದೊಯ್ಯುವರು "ಅಯ್ಯಾ ನಿನ್ನನ್ನು ಸ್ವಲ್ಪ ನಿಮಿಷದಲ್ಲೇ ಕಾಡಿಗೆ ಬಿಡುತ್ತೇವೆ,ಅಲ್ಲಿ ಪ್ರಾಣಿಗಳು ನಿನ್ನನ್ನು ಹರಿದು ತಿಂದುಬಿಡುತ್ತದೆ, ನಿನಗೆ ಯಾವ ಭಯವೂ ಇಲ್ಲವೇ?" ಎಂದರು. ಅದಕ್ಕೆ ಆತ ನಿಧಾನವಾಗಿ ಉತ್ತರಿಸಿದ "ಯಾವ ಕಾಡು?ಯಾವ ಪ್ರಾಣಿ?ಎಲ್ಲಿವೆ ಅವು? ಒಮ್ಮೆ ತಿರುಗಿ ನೋಡಿ"ಎಂದ. ಆ ಹಿಂದೆ ಅಲ್ಲಿದ್ದ ಕಾಡು ಈಗ ಮಾಯ! ಅಲ್ಲಿ ದೊಡ್ಡ ನಗರವೇ ಬೆಳೆದಿದೆ. ಸಂಗಡ ಬಂದಿದ್ದವರಿಗೆ ಆಶ್ಚರ್ಯ! ಇದೆಲ್ಲಾ ಹೇಗಾಯಿತು ಅನ್ನುವಷ್ಟರಲ್ಲಿ ಆತ ವಿವರಿಸಿದ" ನನ್ನನ್ನು ರಾಜನನ್ನಾಗಿ ಮಾಡಿದ ದಿನವೇ ನನ್ನನ್ನು ಇಲ್ಲಿ ಕಾಡಿನಲ್ಲಿ ಬಿಡುತ್ತಾರೆ ಎಂದು ತಿಳಿದೆ.ಅಂದಿನಿಂದಲೇ ನಾನು ಕೆಲಸ ಮಾಡಲು ಆರಂಭಿಸಿದೆ, ಮೊದಲು ಬೇಟೆಗಾರರನ್ನು ಕಳುಹಿಸಿ ಪ್ರಾಣಿಗಳನ್ನು ಓಡಿಸಿದೆ ಕಾಡು ಕಡಿದು ಮರ ಬಳಸಿ ಮನೆಕಟ್ಟಿಸಿ ಬಡವರಿಗೆ ಉಚಿತವಾಗಿ ಹಂಚಿದೆ.ಕೃಷಿ-ಬೆಳೆ-ಹುದ್ದೆ ಕಲ್ಪಿಸಿಕೊಟ್ಟೆ ಈಗ ನಾನು ಅಲ್ಲಿಗೆ ಹೋದರೆ ಶಾಶ್ವತವಾಗಿ ರಾಜನನ್ನಾಗಿ ಮಾಡುತ್ತಾರೆ,ಯಾರಿಗೆ ಬೇಕಿದೆ ನಿಮ್ಮ ಎರಡು ವರ್ಷದ ರಾಜ್ಯಭಾರ, ಅಲ್ಲಿನ ಜನ ನನ್ನ ಬರುವಿಕೆಗೆ ಕಾಯುತ್ತಿದ್ದಾರೆ,ನಾನಿನ್ನು ಬರುವೆ ಧನ್ಯವಾದ" ಎಂದು ದಡ ಸೇರಿದ ತಕ್ಷಣ ಇಳಿದು ಹೊರಟೇಬಿಟ್ಟ.
ನಾವುಗಳು ಎಷ್ಟು ತಿಳಿಯುವುದಿದೆ ಅಲ್ಲವೇ ಈ ಕಥೆಯಿಂದ. ಸುಖದ ಲೋಲುಪ್ತತೆಯಲ್ಲಿ ಮುಳುಗಿ ಮೈಮರೆತು ಈಗ ಮಲಗಿದ್ದರೆ ಕಾಡಿನ ಪ್ರಾಣಿಗಳಿಗೆ ಆಹಾರವಾಗುವುದೇ ಗತಿ ಆದರೆ ಅದೇ ಆ ಅಣೋರಣಿಯನಲ್ಲಿ ಆಸಕ್ತಿಯಿಟ್ಟು, ಮಹಾಮಹಿಮನಲ್ಲಿ ಮನವಿಟ್ಟು, ಸರ್ವಶಕ್ತನಿಗೆ ಶರಣಾಗಿ ನಿಸ್ವಾರ್ಥ ನಂಬಿಕೆಯಿಟ್ಟು ದುಡಿದರೆ ಮುಂದೆ ಶಾಶ್ವತ ರಾಜಮರ್ಯಾದೆ ಪ್ರಾಪ್ತಿ ಖಚಿತ.