ಸರ್ಪ - ಸನ್ಯಾಸಿ

ಊರಿನ ಹೊರಗೆ ಒಂದು ಎತ್ತರದ ಹುತ್ತ, ಅದರಲ್ಲಿ ದೊಡ್ಡದಾದ ಹಾವೊಂದಿತ್ತು, ಆಗಾಗ್ಗೆ ಅದರ ಕಡಿತಕ್ಕೆ ಕೋಳಿ, ಕುರಿ, ಕರುಗಳು ಬಲಿಯಾಗುತ್ತಿದ್ದವು.ಇದರ ಭೀತಿಯಿಂದ ಊರಿನವರು ಆದಷ್ಟು ಹೊರಗೆ ಓಡಾಡುವುದನ್ನು ನಿಲ್ಲಿಸಿದ್ದರು.ಅಲ್ಲಿಗೆ ಒಬ್ಬ ಸನ್ಯಾಸಿ ಭಿಕ್ಷೆಗೆ ಬಂದ, ಬಿಕೋ ಎನ್ನುವ ಊರಿನ ವಿಷಯ ತಿಳಿದು, ಹುತ್ತದ ಬಳಿ ನಡೆದ ಹಾವು ಹೊರಗೆ ಬಂದು ತಲೆಬಾಗಿ ವಂದಿಸಿತು, ತನ್ನ ಗೆಳೆಯನನ್ನು(ಮತ್ತೊಂದು ಹಾವು) ಹಿಂದೊಮ್ಮೆ ಜನರು ಕೋಲಿನಿಂದ ಚಚ್ಚಿ ಕೊಂದ ಕಥೆ ವಿವರಿಸಿತು.ಸನ್ಯಾಸಿ ಸಂತಾಪ ಸೂಚಿಸಿ,ಮುಂದೆ ಯಾರನ್ನೂ ಕಚ್ಚುವುದಿಲ್ಲಾ ಎಂದು ಆಣೆ ಮಾಡಲು ಹೇಳಿದ. ಅದರಂತೆ ಆ ಹಾವು ಮುಂದೆ ಯಾರನ್ನೂ ಕಡಿಯಲಿಲ್ಲ.ಸುಮ್ಮನೆ ಹರಿದಾಡುವುದನ್ನು ಕಂಡ ಮಕ್ಕಳು ನೋಡೋಣವೆಂದು ಪುಟ್ಟ ಕಡ್ಡಿಯನ್ನು ಅದರ ಮೇಲೆ ಎಸೆದರು,ಕಲ್ಲನೇ ಎಸೆದರು,ಬಾಲ ಹಿಡಿದರು,ಎಳೆದರು,ಹಗ್ಗದಂತೆ ಎಳೆದಾಡಿದರು ಕೊಟ್ಟ ಮಾತಿಗೆ ತಪ್ಪದಂತೆ ಹಾವು ಸುಮ್ಮನಿತ್ತು, ಯಾರನ್ನೂ ಕಡಿಯಲಿಲ್ಲ.
ಸುಮಾರು ದಿವಸಗಳ ಬಳಿಕ ಸನ್ಯಾಸಿ ಅದೇ ಊರಿಗೆ ಮತ್ತೆ ಬಂದ.ಮೈಯಲ್ಲಾ ಗಾಯಗೊಂಡ ಹಾವು ನಿಧಾನವಾಗಿ ಹರಿದು ರಸ್ತೆ ದಾಟುತ್ತಿತ್ತು. ಸನ್ಯಾಸಿ ಅದರ ಬಳಿಗೆ ಹೋಗಿ ಅರೆ ಇದೇನಿದು ನೀನು ಹೀಗಾಗಿರುವೆ? ಎಂದ."ಎಲ್ಲಾ ನಿಮ್ಮಿಂದ ಸ್ವಾಮಿ..ನೀವು ಯಾರನ್ನೂ ಕಡಿಯಕೂಡದೆಂದು ಆಣೆ ಇಡಿಸಿದಿರಿ...ಎಲ್ಲಾ ಅದರ ಪರಿಣಾಮ".ಅದಕ್ಕೆ ಸನ್ಯಾಸಿ "ಅಯ್ಯೋ ಸಾಧುವೇ ನಾನು ಯಾರನ್ನೂ ಕಡಿಯಬೇಡಾ ಎಂದೆ ಅಷ್ಟೇ ಹೊರತು,ಬುಸ್ ಎನ್ನಬೇಡಾ ಅನ್ನಲಿಲ್ಲವಲ್ಲಾ" ಎಂದ.ಅಂದಿನಿಂದ ಹಾವು ಬದುಕುವ ರೀತಿ ಕಲಿಯಿತು.