ಎರಡು ಕಪ್ಪೆಗಳು

ಮಳೆಗಾಲದ ಸಮಯ ರಾತ್ರಿ ಸಮಯ ಭೀಕರ ಸಿಡಿಲು ಗುಡುಗು ಧಾರಾಕಾರವಾಗಿ ಸುರಿಯುವ ಮಳೆ ಝರಿ ಪ್ರವಾಹದಿಂದುಕ್ಕಿ ಹರಿಯುವುದನ್ನು ಅರಿತ ಕಪ್ಪೆಗಳು ಛಂಗನೆ ನೆಗೆಯುತ್ತಾ ನೆಗೆಯುತ್ತಾ ವಲಸೆ ಹೋಗುತ್ತಿದ್ದವು, ಆಗ ಎರಡು ಕಪ್ಪೆಗಳು ಕತ್ತಲೆಯ ಕಾನನದಿ ಕಣ್ಕಾಣದೆ ಆಳವಾದ ಕಂದರದಲ್ಲಿ ಕಾಲುಜಾರಿ ಬಿದ್ದುಬಿಟ್ಟವು.ಎಷ್ಟು ಪ್ರಯತ್ನಿಸಿದರೂ ಮೇಲಕ್ಕೆ ಎಟುಕದಷ್ಟು ಆಳ, ಎರಡೂ ಕಪ್ಪೆಗಳು ಎಡಬಿಡದೆ ಜಿಗಿಯಲೆತ್ನಿಸಿದವು. ಉಳಿದ ಕಪ್ಪೆಗಳು ಇದನ್ನು ಕಂಡು " ಅಯ್ಯೋ ಬಿದ್ದುಬಿಟ್ಟಿರಾ, ಅಷ್ಟೇ ಬಿಡಿ ಅಲ್ಲಿದ್ದರೆ ನೀವು ಬದುಕಿದ್ದರೂ ಸತ್ತಂತೆ,ಇನ್ನೇನು ನಿಮ್ಮ ಕಥೆ ಅಷ್ಟೇ" ಎಂದು ಹಾಸ್ಯ ಮಾಡುತ್ತ ನಗಲಾರಂಭಿಸಿದವು, ಈ ಎರಡೂ ಕಪ್ಪೆಗಳು ಬಿಡದೆ ಪ್ರಯತ್ನ ಮಾಡುತ್ತಿದ್ದವು, ಉಳಿದವು ಕೂಗುತ್ತಲೇ ಇದ್ದವು"ಏ ಕೇಳಿಸಲಿಲ್ಲವೇ ನಿಮಗೆ, ನೀವಿನ್ನು ಸತ್ತಂತೆ,..ಸತ್ತಂತೆ," ಅಷ್ಟರಲ್ಲಿ ಒಂದು ಕಪ್ಪೆ ನೆಗೆದೂ ನೆಗೆದೂ ಸುಸ್ತಾಗಿ ತಲೆಕೆಳಗಾಗಿ ಬಿದ್ದು ಪ್ರಾಣ ಬಿಟ್ಟಿತು, ಇನ್ನೊಂದು ಮಾತ್ರ ತನ್ನ ಪ್ರಯತ್ನವನ್ನು ಬಿಡದೇ ಮಾಡಿತ್ತು,ಮೇಲಿದ್ದ ಕಪ್ಪೆಗಳು ತಂಪಾಡಿಗೆ ಕೈಚಾಚಿ ಆಡಿಕೊಳ್ಳುತ್ತಾ ಅರಚುತ್ತಲೇ ಇದ್ದವು ಆದರೆ ಉಳಿದಿದ್ದ ಒಂದೇ ಕಪ್ಪೆ ಎಗರೀ ಎಗರೀ ಸುಸ್ತಾದರೂ ಶಕ್ತಿಮೀರಿ ಮೇಲಕ್ಕೆ ಜಿಗಿದೇ ಬಿಟ್ಟಿತು,,ಮೇಲಿದ್ದ ಕಪ್ಪೆಗಳು ಅಚ್ಚರಿಯಿಂದ ಬೆಪ್ಪಾಗಿ ಮುಂದೆಬಂದು ಅದನ್ನು ಅಭಿನಂದಿಸಿದವು,"ನಾವೆಲ್ಲಾ ನಿನ್ನನ್ನು ಅಷ್ಟು ದುರ್ಲಕ್ಷ್ಯದಿಂದ ಕಡೆಗಣಿಸಿದರೂ ನೀನು ಉತ್ಸಾಹ ಕಳೆದುಕೊಳ್ಳದೆ ಜೀವಂತವಾಗಿ ಮೇಲೇರಿ ಬಂದೆ,ನಮ್ಮನು ಕ್ಷಮಿಸು ನಿನ್ನ ಸಾಹಸ ಮೆಚ್ಚುವಂಥದ್ದು" ಎಂದು ಪ್ರಶಂಸಿಸಿದವು,ಅದಕ್ಕೆ ಆ ಕಪ್ಪೆ "ಅಯ್ಯಾ ನೀವೇನು ಹೇಳುತ್ತಿದ್ದೀರೋ ನನಗೊಂದೂ ತಿಳಿಯದು ನನಗೆ ಹುಟ್ಟು ಕಿವುಡು, ನೀವೆಲ್ಲಾ ನನ್ನ ಕಡೆ ನೋಡಿಕೊಂಡು,ಕೈ ಬೀಸುತ್ತಾ ಅಷ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು" ಎಂದಿತು.
ಈ ಕಥೆಯಲ್ಲಿ ಎರಡು ನೀತಿಗಳಿವೆ.
೧.ಮಾತಿನ ಶಕ್ತಿ ಬಿದ್ದವರನ್ನು ಮೇಲಕ್ಕೂ ಎತ್ತಬಹುದು.
೨. ಕೆಳಕ್ಕೆ ಬಿದ್ದವರನ್ನು ಅದೇ ಮಾತಿನಿಂದ ಧೈರ್ಯಗೆಡಿಸಿದರೆ ಮತ್ತೂ ಪಾತಾಳಕ್ಕೆ ತಳ್ಳಿದಂತಾಗಿ ಮೃತ್ಯುವೇ ಬರಬಹುದು