ಕೋಪಕ್ಕೊಂದು ಮೊಳೆ

ಯುವಕನೊಬ್ಬನಿಗೆ ಬಹಳ ಮುಂಗೋಪದ ಸ್ವಭಾವ. ಇದರಿಂದಾಗಿ ಅವನಿಗೂ ಅವನ ಕುಟುಂಬದವರಿಗೂ ಆಗಿಂದಾಗ್ಗೆ ಕೆಟ್ಟ ಆಪಾದನೆಗಳು ಕೇಳಿ ಬರುತ್ತಿದ್ದವು. ಅದನ್ನರಿತ ಯುವಕ ತನ್ನ ಕೋಪವನ್ನು ತಡೆಯಲಾಗದೆ ಸಂಕಟಕ್ಕೊಳಗಾಗುತ್ತಲೇ ಇದ್ದ.ಒಮ್ಮೆ ಅವನ ತಂದೆ ಮಗನ್ನನ್ನು ಕರೆದು "ಮಗು ನೀನು ನಿಜವಾಗಿಯೂ ನಿನ್ನ ಕೋಪವನ್ನು ಹತೋಟಿಯಲ್ಲಿ ಇಡಬೇಕಿದ್ದಲ್ಲಿ ನಿನಗೆ ಕೋಪಬಂದಾಗಲೆಲ್ಲ ತೋಟದಲ್ಲಿನ ಬೇಲಿಯ ಮರದ ಮೇಲೆ ಒಂದು ಮೊಳೆಯನ್ನು ಹೊಡಿ"ಎಂದ. ಯುವಕ ಮೊದಲ ದಿನವೇ 37 ಮೊಳೆ ಹೊಡೆದ,ನಂತರ 21,13,8,3,2,1 ಹೀಗೇ ಬರುಬರುತ್ತಾ ಕೋಪ ಬರುವುದು ತಾನಾಗೇ ಕಡಿಮೆಯಾಯಿತು. ಅಪ್ಪನಿಗೆ ವಿಷಯ ತಿಳಿಸಿದ.ತಂದೆ "ಬಹಳ ಸಂತೋಷ ಮಗೂ ಇನ್ನು ಮುಂದೆ ನೀನು ಕೋಪಬರುವುದನ್ನು ತಡೆಯಬೇಕು,ಹಾಗೆ ಮಾಡಿದಾಗಲೆಲ್ಲಾ ಅಲ್ಲಿಂದ ಒಂದೊಂದು ಮೊಳೆಯನ್ನು ತೆಗೆಯುತ್ತಾ ಬಾ" ಅಂದ.
ಹಾಗೇ ದಿನಗಳು,ವಾರಗಳು ತಿಂಗಳುಗಳೇ ಕಳೆದವು.ತನ್ನ ಕೋಪವನ್ನು ತಡೆಯಲು ಶಕ್ತನಾದಾಗಲೆಲ್ಲಾ ಒಂದೊಂದಾಗಿ ಮೊಳೆಗಳನ್ನು ತೆಗೆದ"ಎಲ್ಲಾ ಕಳಚಿದ ನಂತರ ಸಂತಸದಿಂದ ಮತ್ತೆ ತನ್ನ ತಂದೆಗೆ ತಿಳಿಸಿದ. ತಂದೆ "ನನಗೆ ಬಹಳ ಖುಷಿಯಾಗುತ್ತಿದೆ ಮಗೂ,ನಿನ್ನ ಗುರಿಯನ್ನು ನೀನು ಮುಟ್ಟಿದೆ ಆದರೆ ನೋಡು ಮೊಳೆಯಿಂದ ಆ ಮರಕ್ಕೆ ತಾಗಿದ ಏಟುಗಳು ಮಾತ್ರ ಹೋಗಲಿಲ್ಲ. ಕೋಪದಿಂದಾಗುವ ಅನಾಹುತವೂ ಹಾಗೇ ಶಾಶ್ವತವಾಗಿ ಉಳಿದು ಬಿಡುತ್ತದೆ". ತಂದೆಯ ಮಾತಿನ ಅರ್ಥ ಮಗನಿಗರಿವಾಯಿತು.