ಮಾತನಾಡುವ ಮರ

ಪುಟ್ಟ ಬಾಲಕನೊಬ್ಬ ದಿನಾ ಒಂದು ಮರದ ಬಳಿ ಆಡುತ್ತಿದ್ದ, ಅದರ ಮೇಲೆ ಹತ್ತುತ್ತಿದ್ದ, ಅದರ ಟೊಂಗೆ ಹಿಡಿದು ಜೋತಾಡುತ್ತಿದ್ದ. ಆ ಮರಕ್ಕೂ ಬಾಲಕನಿಗೂ ನಂಟೇ ಬೆಳೆಯಿತು.ಒಂದು ದಿನ ಬಾಲಕ ಪ್ರತಿನಿತ್ಯದಂತೆ ಆಡದೆ ಸುಮ್ಮನೆ ಮರದಡಿ ಕುಳಿತ.ಅದನ್ನು ಕಂಡ ಮರ ಮಾತನಾಡಿತು "ಮಗು ಏನಾಯಿತು?"ಎಂದಿತು, ಆಗ ಬಾಲಕ "ನನಗೆ ಹಸಿವಾಗಿದೆ ತಿನ್ನಲು ಮನೆಯಲ್ಲಿ ಏನೂ ಇಲ್ಲ"ಎಂದ.ತಕ್ಷಣ ಆ ಮರ ತನ್ನ ಎಲೆಗಳ ಮರೆಯಲ್ಲಿದ್ದ ಹಣ್ಣನ್ನು ಬೀಳಿಸಿತು.ಅದನ್ನು ತಿಂದು ಸಂತೋಷದಿಂದ ದಿನಾ ಅಲ್ಲೇ ಆಡಲು ಬರುತ್ತಿದ್ದ.ಸ್ವಲ್ಪ ವರ್ಷಗಳ ಕಾಲ ಬಾಲಕ ಮರಳಿ ಮರದ ಬಳಿ ಬರಲಿಲ್ಲ,ಮರಕ್ಕೆ ಬೇಸರವಾಗಿತ್ತು.ಒಂದು ದಿನ ಎದುರಿಗೆ ಕಾಣಿಸಿಕೊಂಡು ಬೇಸರದ ಮುಖ ಮಾಡಿಕೊಂಡಿರಲು ಮರವು ಕಾರಣ ಕೇಳಿತು."ಮಗೂ ನನ್ನಬಳಿ ಆಡಲು ಬಾ"ಎಂದಿತು.ಅದಕ್ಕೆ ಆ ಹುಡುಗ ನಾನೀಗ ದೊಡ್ಡವನಾಗಿದ್ದೇನೆ,ಆದರೆ ವ್ಯಾಪಾರ ಮಾಡುವ ಬಯಕೆ ಆದರೆ ನನ್ನಲ್ಲಿ ಹಣವಿಲ್ಲ"ಎಂದ.ತಕ್ಷಣ ಆಮರ ತನ್ನಲ್ಲಿದ್ದ ಎಲ್ಲಾ ಹಣ್ಣುಗಳನ್ನು ಆತನಿಗೆ ಕೊಟ್ಟಿತು.ಅದಲ್ಲು ಮಾರಿ ವ್ಯಾಪಾರದಲ್ಲಿ ಚೆನ್ನಾಗೇ ಹಣ ಮಾಡಿದ.ಸ್ವಲ್ಪಕಾಲ ಮರವನ್ನು ಭೇಟಿ ಮಾಡಲು ಬರಲೇ ಇಲ್ಲ.ಮರಕ್ಕೆ ಮತ್ತೆ ಬೇಸರವಾಗಿತ್ತು.ಕೆಲವು ದಿನಗಳ ಬಳಿಕ ಮತ್ತೆ ಬಾಲಕ ಹಿಂತಿರುಗಿದ.ಮರ ಮತ್ತದೇ ಆಸೆಯಿಂದ "ನನ್ನೊಡನೆ ಆಡಲು ಬಾ"ಎಂದಿತು.ಹುಡುಗನಿಂದ ಅದೇ ಉತ್ತರ"ನನಗೀಗ ಆಡಲು ಸಮಯವಿಲ್ಲ,ನಾನು ಬಹಳ ಕಷ್ಟದಲ್ಲಿದ್ದೇನೆ ನನಗೆ ಆಶ್ರಯಕ್ಕೊಂದು ಮನೆ ಕಟ್ಟಿಕೊಳ್ಳಬೇಕಾಗಿದೆ,ಆದರೆ ಕಟ್ಟಿಗೆ,ಮರ ಕೊಳ್ಳುವಷ್ಟು ಹಣವಿಲ್ಲ"ಎಂದ.ಹಿಂದೂ ಮುಂದು ನೋಡದೆ ಮರ"ಮಗೂ ನನ್ನ ಈ ದೊಡ್ಡ ಮರದ ಟೊಂಗೆಗಳನ್ನು ಕತ್ತರಿಸಿ ಉಪಯೋಗಿಸಿಕೋ"ಎಂದಿತು.ಅಂತೆಯೇ ಅವನು ಅದನ್ನು ಉಪಯೋಗಿಸಿ ಮನೆಯನ್ನೂ ಕಟ್ಟಿದ.ವರ್ಷ ಕಳೆದರೂ ಮರಳಿಬಾರದ ಹುಡುಗನನ್ನು ಕಾಯುತ್ತಾ ಮರ ಬೇಸರದಲ್ಲಿತ್ತು.ಒಂದು ದಿನ ಆತ ಮತ್ತೆ ಬಂದ.ಎಂದಿನಂತೆ "ನನ್ನ ಬಳಿ ಆಡಲು ಬಾ"ಎಂದು ಮರ ಕರೆಯಿತು.ಹುಡುಗನೂ ಎಂದಿನಂತೆ "ನನಗೀಗ ಆಡಲು ಸಮಯವಿಲ್ಲ,ನನಗೀಗ ಮದುವೆಯಾಗಿದೆ,ನಾನು ಕೆಲಸಕ್ಕೆ ದೂರದೂರಿಗೆ ನದಿ ದಾಟಿ ಹೋಗಬೇಕಾಗಿದೆ ಈಜು ಬಾರದು,ದೋಣಿ ಮಾಡಿಕೊಳ್ಳಲು ಮರದ ಹಲಗೆ ಬೇಕು"ಎಂದ.ಕೂಡಲೇ ಆ ಮರ"ಮಗೂ ನನ್ನ ಕಾಂಡದಲ್ಲಿ ಹೆಚ್ಚು ಹಲಗೆಗಳನ್ನು ಮಾಡಿಕೊಳ್ಳಬಹುದು,ಉಪಯೋಗಿಸಿಕೋ" ಎಂದಿತು.ಅಂತೆಯೇ ಉಳಿದ ಮರವನ್ನು ಕಡಿದು ದೋಣಿ ಮಾಡಿಕೊಂಡು ಸಂಗಾತಿಯೊಡನೆ ಹೊರಟುಹೋದ.ದಶಕಗಳು ಕಳೆದರೂ ಮರ ಆತನಿಗೆ ಕಾಯುತ್ತಲೇ ಇತ್ತು. ಒಮ್ಮೆ ಮರಳಿ ಬಂದ ಆತ ಮುದುಕನಾಗಿದ್ದ.ಮರವು ಅದೇ ಭಾವನೆಯಿಂದ"ಮಗೂ ಹೇಗಿದ್ದೀಯಾ" ಎಂದಿತು.ಆಗ ಅವನು "ನನಗೆ ಬಹಳ ದಣಿವಾಗಿದೆ"ಸ್ವಲ್ಪ ವಿಶ್ರಾಂತಿ ಬೇಕು"ಎಂದ. ಆತನಿಗೆ ಕೊಡಲು ಮರದ ಬಳಿ ಏನೂ ಉಳಿದಿರಲಿಲ್ಲ"ಮಗೂ ನನ್ನಲ್ಲಿ ಉಳಿದಿರುವುದು ಈ ಬುಡ ಮತ್ತು ಬೇರು, ಮಾತ್ರ ,ಬಾ ಈ ಬುಡದಿಮ್ಮಿಯ ಮೇಲೆ ಕುಳಿತು ವಿಶ್ರಮಿಸು"ಎಂದಿತು.ಅವನು ಅದರ ಮೇಲೆ ಕುಳಿತ.ಮರಕ್ಕೆ ಇದರಿಂದ ಆನಂದವಾಯಿತು.ಮನಸ್ಸಿನಲ್ಲೇ ಖುಷಿ ಅನುಭವಿಸಿತು.
ನೀತಿ:ಇಲ್ಲಿ ಬರುವ ಮರವೇ ನಮ್ಮ ತಂದೆ-ತಾಯಿಯರ ಹಾಗೆ,ಅವರು ಬಯಸುವುದೇ ನಮ್ಮ ಸಹಬಾಳ್ವೆ.