ತಂದೆಯ ಶ್ರಮ

ತಂದೆಯೊಬ್ಬನು ತನ್ನ ಸಂಸಾರ ಸಾಗಿಸಲು ದಿನವಿಡೀ ರೊಟ್ಟಿಯನ್ನು ಮಾರುತ್ತಿದ್ದ, ಸಂಜೆಯ ವೇಳೆ ಉಳಿದ ಸಮಯದಲ್ಲಿ ವೃತ್ತಿ ಶಿಕ್ಷಣವನ್ನೂ ಮಾಡುತ್ತಿದ್ದ.ಮನೆಯ ಮಡದಿ ಮಕ್ಕಳ ಜೊತೆ ಕಾಲ ಕಳೆಯಲು ಸಾಧ್ಯವೇ ಇರುತ್ತಿರಲಿಲ್ಲ.ವರುಷಗಳು ಕಳೆದವು, ಶಿಕ್ಷಣ ಮುಗಿಯಿತು, ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನೂ ಆದ.ಸರಿ ಅದಕ್ಕೆ ತಕ್ಕ ಪ್ರತಿಫಲದಂತೆ ಒಳ್ಳೆಯ ಕೆಲಸವೂ ದಕ್ಕಿತು.ಕೆಲಸದಲ್ಲಿ ಒಳ್ಳೆಯ ಹೆಸರು, ಹಣ ಸಂಪಾದಿಸತೊಡಗಿದ.ಉತ್ತಮ ಅಧಿಕಾರಿಯಾಗುವ ಸಂಭವ ಇದ್ದುದರಿಂದ ಇನ್ನೂ ಹೆಚ್ಚು ಹೆಚ್ಚು ಓದಲು ಮನಸ್ಸು ಮಾಡಿದ.ಇದರಿಂದ ಮನೆಯವರೊಡನೆ ಕಾಲ ಕಳೆಯುವುದನ್ನೇ ಮರೆತ.ಅಧಿಕಾರಿಯೂ ಆದ,ಕಂಪನಿಯ ಮಾಲೀಕನೂ ಆದ ದೊಡ್ಡ ಬಂಗಲೆ ಕಾರುಗಳು ಕೈಕಾಲಿಗೆಲ್ಲಾ ಆಳುಗಳು.
ಒಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಕರೆದು ಹೇಳಿದ ಇನ್ನು ದುಡಿದದ್ದು ಸಾಕಾಯ್ತು ಮುಂದೆ ಮನೆಯವರ ಜೊತೆ ನೆಮ್ಮದಿಯಿಂದ ಇರುವೆ ಎಂದ.ಮಡದಿ ಮಕ್ಕಳಿಗೆ ಹೇಳತೀರದಷ್ಟು ಸಂತೋಷವಾಯಿತು.ಆದಿನ ಆನಂದಿಂದ ಔತಣವನ್ನೇ ಏರ್ಪಡಿಸಿದರು .ನಾಳೆಯಿಂದ ನಮ್ಮವರೆಲ್ಲಾ ಒಟ್ಟಿಗೆ ಇರುವ ಸಂಭ್ರಮದ ಕನಸು ಕಂಡರು,ಕುಡಿದರು,ಕುಣಿದರು, ರಾತ್ರಿ ಕಣ್ತುಂಬ ನಿದ್ರೆ ಮಾಡಿದರು.ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ತಂದೆಯ ಜೊತೆ ಸಂತೋಷದಿ ಕಳೆಯುವ ದಿನಗಳ ನನಸನ್ನು ನಾಂದಿಯಾಡುವ ಭರದಲ್ಲಿ ಇದ್ದರು.ಆದರೆ ತಂದೆ ರಾತ್ರಿ ಮಲಗಿದವನು ಬೆಳಿಗ್ಗೆ ಏಳಲೇ ಇಲ್ಲ. ಹೃದಯ ಅಘಾತದಿಂದ ಯಾವಾಗ ಅವನ ಪ್ರಾಣ ಹಾರಿತ್ತೋ ಯಾರಿಗೂ ತಿಳಿಯದಾಗಿತ್ತು.
ನೀತಿ: ಮಡದಿ, ಮಕ್ಕಳ ಜೊತೆ ಕಾಲ ಕಳೆಯುವುದು ಸಂಸಾರಿಯ ಮೊದಲ ಧರ್ಮ