ಅಹಂ

ಇಬ್ಬರು ಬಾಲ್ಯ ಸ್ನೇಹಿತರು ಇದ್ದರು.ಬೆಳೆದು ದೊಡ್ಡವರಾದ ಮೇಲೆ ಒಬ್ಬನು ಮಹಾ ತಪಸ್ವಿಯೂ ಮತ್ತೊಬ್ಬನು ಬಹಳ ಸಿರಿವಂತನಾಗಿ ರಾಜನಾದನು.ತಪಸ್ವಿಯು ಊರ ಹೊರಗಿನ ಬೆಟ್ಟಗುಡ್ಡಗಳಲ್ಲಿ ವಾಸವಾಗಿದ್ದನು.ಒಮ್ಮೆ ರಾಜನಾದವನು ತನ್ನ ಗೆಳೆಯನನ್ನು ನೋಡಲು ಬಯಸಿ ಅವನಿಗಾಗಿ ಹುಡುಕಾಡಿ,ಕಾಡು ಮೇಡು ಅಲೆದು ಕಡೆಗೂ ಆತನನ್ನು ಕಂಡು ತನ್ನ ಗೆಳೆಯನು ಮಹಾ ಜ್ಞಾನಿಯಾಗಿರುವುದನ್ನು ಕಂಡು ಸಂತೋಷದಿಂದ ತನ್ನ ಮನೆಗೆ ಔತಣಕ್ಕೆ ಆಹ್ವಾನವಿತ್ತನು.ಔತಣಕ್ಕೆ ಗೆಳೆಯ ಬರುವದಿನವನ್ನೇ ಕಾದಿದ್ದು ಭಾರೀ ವಿಜೃಂಭಣೆಯ ಅಲಂಕಾರಗಳೊಂದಿಗೆ ಬರಮಾಡಿಕೊಳ್ಳಲು ಸಜಾಗಿದ್ದನು.ಅರಮನೆಯ ಮುಂದೆ ಕೆಂಪಾದ ಕಂಬಳಿ ಹಾಸಿತ್ತು.ತಪಸ್ವಿ ಗೆಳೆಯ ಅರಮನೆಯ ಹೆಬ್ಬಾಗಿಲ ಮುಂದೆ ಬಂದನು. ಅಲ್ಲೊಬ್ಬ ಕಾವಲುಗಾರ ತಪಸ್ವಿಯನ್ನು ನೋಡಿ"ಅಯ್ಯಾ ನೋಡಿದೆಯಾ ನಿನ್ನ ಗೆಳೆಯನ ಶ್ರೀಮಂತಿಕೆಯನ್ನ,ನಿನ್ನಲ್ಲಿ ಏನೂ ಇಲ್ಲ ಎಂದು ನಿನಗೆ ತೋರಿಸಲೆಂದೇ ಹೀಗೆ ಮಾಡಿದ್ದಾನೆ"ಎಂದ,ತಪಸ್ವಿಗೆ ತಾಳ್ಮೆ ಕರಗಿತು ಸ್ವಲ್ಪದೂರಕ್ಕೆ ಓಡಿಹೋಗಿ ಮಣ್ಣಿನ ರಾಡಿ(ಕೊಚ್ಚೆ)ಯಲ್ಲು ತನ್ನ ಕಾಲನ್ನು ಅದ್ದಿ ಆ ಕಂಬಳಿಯಮೇಲೆಲ್ಲಾ ಕೊಳೆ ಮಾಡಿ ಒಳಗೆ ನಡೆದ,ಅಷ್ಟರಲ್ಲಿ ಅಲ್ಲಿಗೆ ಬಂದ ರಾಜನು "ಯಾರಲ್ಲಿ? ಯಾರು ಈ ಸೊಗಸಾದ ಕಂಬಳಿಯನ್ನು ಹೀಗೆ ಮಾಡಿದ್ದು?" ಎಂದು ಕೂಗಿದ.ಅದಕ್ಕೆ ಆತನ ಗೆಳೆಯ ತಪಸ್ವಿಯು "ನಾನೇ ಗೆಳೆಯ ಹಾಗೆ ಮಾಡಿದ್ದು, ನಿನ್ನ ಸಿರಿವಂತಿಕೆಯ ಅಮಲನ್ನು ಮುರಿಯಲು ಹಾಗೆ ಮಾಡಿದೆ,ನಿನ್ನ ಶ್ರಿಮಂತಿಕೆಯನ್ನು ತೋರಿಸಲು ಹೀಗೆ ಅಲಂಕಾರಗಳನ್ನು ಮಾಡಿದ್ದೀಯಾ?"ಎಂದನು. ಅದಕ್ಕೆ ರಾಜನು "ಅಯ್ಯಾ ಗೆಳೆಯ ನಾನೇನೋ ನೀನು ಜೀವನದಲ್ಲಿ ಎಲ್ಲವನ್ನೂ ತ್ಯಜಿಸಿದ ವೈರಾಗಿ, ತಪಸ್ವಿ, ಮಹಾ ಜ್ಞಾನಿ ಎಂದುಕೊಂಡಿದ್ದೆ ಆದರೆ ಈ ಅಹಂ ಎನ್ನುವುದು ನಿನಗೆ ಇನ್ನೂ ಅಂಟಿಕೊಂಡಿದೆ. ಈಗ ನನಗೂ ನಿನಗೂ ಏನೂ ಅಂತರವೇ ಇಲ್ಲ. ನನಗೆ ಹಣದ ಅಹಂ ಇದ್ದರೆ ನಿನಗೆ ಗುಣದ ಅಹಂ ಇದೆ."ಎಂದು ಬೇಸರದಿಂದ ನುಡಿದ.
ನೀತಿ: ಹಣವಾಗಲಿ, ಗುಣವಾಗಲಿ ಎಲ್ಲವೂ ಆಭಗವಂತನಿಂದಲೇ ಪ್ರಾಪ್ತಿಯಾದವುಗಳು,ಆಕಸ್ಮಾತ್ ಅಪಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟರೆ ಯಾವುದೂ ನಮ್ಮಜೊತೆ ಬರಲಾರವು.ಇದ್ದಷ್ಟು ಕಾಲ ಇತರರಿಗೆ ಒಳಿತು ಮಾಡಿದಲ್ಲಿ ಮುಂದೆ ಇದೇ ಜನ್ಮದಲ್ಲೇ ಅದರ ಪ್ರತಿಫಲ ಸಿಗಿವುದು ಖಚಿತ.