ಭಿಕ್ಷೆ

ಪ್ರತಿನಿತ್ಯದಂತೆ ರಥವನೇರಿ ರಾಜನೊಬ್ಬನು ರಸ್ತೆಯಲ್ಲಿ ಸವಾರಿ ಹೋಗುತ್ತಿದ್ದನು. ಅದೇ ರಸ್ತೆಯಲ್ಲಿ ಒಬ್ಬ ಭಿಕ್ಷುಕ ಅಕ್ಕಿಯನ್ನು ಭಿಕ್ಷೆಯಾಗಿ ಪಡೆದು ಅದನ್ನು ತನ್ನ ಚೀಲಕ್ಕೆ ತುಂಬಿಕೊಳ್ಳುತ್ತಿದ್ದನು.ರಾಜನು ಬರುವುದನ್ನು ಕಂಡು ಭಿಕ್ಷುಕ ಅವನಲ್ಲಿಗೆ ಓಡಿಹೋದನು,ರಾಜನು ನೀನ್ಯಾರೆಂದು ಕೇಳಲು "ಸ್ವಾಮಿ ನಾನೊಬ್ಬ ನಿರ್ಗತಿಕ, ನನ್ನಲಿ ಏನೂ ಇಲ್ಲ, ಏನಾದರೂ ಭಿಕ್ಷೆ ನೀಡಿ, ಊಟ ಮಾಡಿ ಎರಡು ದಿನಗಳೇ ಆಗಿದೆ" ಎಂದ. ಅದಕ್ಕೆ ರಾಜನು "ನಿನಗೆ ಈ ರಾಜನಿಗೆ ನೀಡಲು ಏನೂ ಇಲ್ಲವೇ? ಬರೀ ಈ ಆರ್ತ ನುಡಿಗಳು ಮಾತ್ರವೇ?"ನನಗೇ ಎನಾದರೂ ಕೊಡು"ಎಂದ.ಆಶ್ಚರ್ಯಗೊಂಡ ಭಿಕ್ಷುಕ ಬೇಸರದಿಂದ ಒಲ್ಲದ ಮನಸ್ಸಿನಲ್ಲಿ ತನ್ನ ಎರಡೇ ಎರಡು ಬೆರಳುಗಳಿಂದ ನಾಲ್ಕೇ ನಾಲ್ಕು ಅಕ್ಕಿ ಕಾಳನ್ನು ರಾಜನ ಕೈಗಿಟ್ಟ.ರಾಜ ತನ್ನ ಕುದುರೆಗಳಿಗೆ ಕಟ್ಟಿದ್ದ ಹಗ್ಗ ಜಗ್ಗಿ ಮುಂದಕ್ಕೆ ಸಾಗಿದ. ತನಗೆ ಏನೂ ನೀಡದೆ ಹೊರಟುಹೋದ ರಾಜನನ್ನು ಭಿಕ್ಷುಕ ಶಪಿಸಿದ. ಬೇರೆ ಹಾದಿಬೀದಿಗಳಲ್ಲಿ ಭಿಕ್ಷೆ ಬೇಡಿ ಸಂಜೆಯ ವೇಳೆಗೆ ಮನೆಗೆ ಬಂದ. ಮನೆಯಲ್ಲಿ ಒಂದು ದೊಡ್ಡ ಚೀಲದಲ್ಲಿ ಅಕ್ಕಿ ಇತ್ತು.ಆಶ್ಚರ್ಯದಿಂದ ಚೀಲದಲ್ಲಿ ಕೈಹಾಕಿ ನೋಡಲು ಒಂದು ಚಿನ್ನದ ನಾಣ್ಯ ಕಂಡಿತು.ಚೀಲವನ್ನು ತೆಗೆದು ಅಕ್ಕಿಯನ್ನು ಕೆಳಗೆ ಸುರಿದ.ಮತ್ತೊಂದು,ಮತ್ತೆ ಎರಡು ಹೀಗೆ ನಾಲ್ಕು ಚಿನ್ನದ ನಾಣ್ಯಗಳು ಸಿಕ್ಕಿದವು.ತಕ್ಷಣ ನೆನಪಿಗೆ ಬಂದಿತು "ಇದು ರಾಜನೇ ಕರುಣಿಸಿರುವ ಆಸ್ತಿ,ನಾನು ಉದಾರಿಯಾಗಿ ಕೈತುಂಬ ಅಕ್ಕಿ ಕಾಳನ್ನು ಕೊಟ್ಟಿದ್ದರೆ ಚೀಲದ ತುಂಬ ಚಿನ್ನದ ನಾಣ್ಯಗಳೇ ದೊರೆಯುತ್ತಿದ್ದವೇನೋ"ಎಂದುಕೊಂಡು ಬೇಸರ ಪಟ್ಟನು.ಕಾಲ ಮಿಂಚಿತ್ತು.