ಮಹಾರಾಜ?(ಹಾಸ್ಯ)

ತೆನ್ನಾಲಿ ರಾಮ ಕೃಷ್ಣ ಒಮ್ಮೆ ಬೀದಿಯಲ್ಲಿ ನಡೆದು ಹೋಗುವಾಗ ಬೇರೊಬ್ಬ ರಾಜ್ಯದ ವ್ಯಕ್ತಿಯೊಬ್ಬ ಅವನ ಎದುರಿಗೇ ನಡೆದು ಬರುತ್ತಿದ್ದ. ಅಕಸ್ಮಿಕವಾಗಿ ರಾಮಕೃಷ್ಣನ ಭುಜ ಆತನಿಗೆ ತಗುಲಿತು.ತಕ್ಷಣ ಕೋಪಗೊಂಡ ಆ ವ್ಯಕ್ತಿ ರಾಮಕೃಷ್ಣನನ್ನು ಶಪಿಸಲು ಶುರುಮಾಡಿದ "ಹೇ!! ನಿನಗೇನು ಕಣ್ಣು ಕಾಣುವುದಿಲ್ಲವೇ? ನಾನು ಯಾರೆಂದು ತಿಳಿದಿರುವೆ? ನಾನು ಒಬ್ಬ ರಾಜನ ಸಲಹೆಗಾರ"ಎಂದು ಜಂಭದಿಂದ ಕೂಗಿ ಹೇಳಿದ.ಅದಕ್ಕೆ ರಾಮಕೃಷ್ಣ "ಓಹೋ ಹಾಗೋ ನೀನು ಬರೀ ಸಲಹೆಗಾರನೋ...ಆದರೆ ನಾನು ಮಹಾರಾಜ ತಿಳಿಯಿತೋ"ಎಂದ. ಕೂಡಲೇ ಆ ವ್ಯಕ್ತಿ "ಹಾ! ಹಾಗಾ? ತಪ್ಪಾಯಿತು ಮಹಾಪ್ರಭು,ತಾವು ಯಾವ ರಾಜ್ಯಕ್ಕೆ ರಾಜರು?" ಎಂದ. ರಾಮಕೃಷ್ಣ ನಕ್ಕು"ನನಗೆ ನಾನೇ ಮಹಾರಾಜ, ನನ್ನ ಭಾವೋದ್ರೇಗಕ್ಕೆ, ನನ್ನ ನಡೆ ನುಡಿಗೆ ನಾನೇ ಅಧಿಪತಿ, ನೀನು ಈಗಷ್ಟೇ ತಾಳ್ಮೆ ಕಳೆದುಕೊಂಡಂತೆ ನಾನೆಂದೂ ನಡೆದಿಲ್ಲ, ನಡೆಯುವುದೂ ಇಲ್ಲ."ಎಂದ. ತಕ್ಷಣ ಆ ಸಲಹೆಗಾರನಿಗೆ ತನ್ನ ತಪ್ಪರಿವಾಗಿ ತಲೆಬಾಗಿ ಮುಂದೆ ಸಾಗಿದ.