ಯಕ್ಷನ ಎರಡು ವರಗಳು

ದೂರದ ಹಳ್ಲಿಯಲ್ಲಿ ಒಬ್ಬ ಬಟ್ಟೆ ನೇಕಾರ(weaver) ವಾಸವಾಗಿದ್ದ.ಬಟ್ಟೆ ನೇಯುವುದು ಅವನ ಕಸುಬು.ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ದೊಡ್ಡದೊಂದು ಮರವನ್ನು ನೋಡಿ ಈ ಮರವನ್ನು ಕಡಿದರೆ ಒಲೆಗೆ,ಮನೆಗೆ ಉಪಯೋಗಕ್ಕೆ ಬರುತ್ತದೆ" ಎಂದು ನಿರ್ಧರಿಸಿ ಮರುದಿನ ಮರ ಕತ್ತರಿಸಲು ಬೇಕಾದ ಮಚ್ಚು,ಕೊಡಲಿ,ಗರಗಸ ಎಲ್ಲಾ ತಂದು ಕೆಲಸ ಶುರುಮಾಡಿದ.ಕೂಡಲೇ ಮರದಲ್ಲಿ ವಾಸವಾಗಿದ್ದ ಯಕ್ಷನೊಬ್ಬ "ಅಯ್ಯಾ ಈ ಮರದಲ್ಲಿ ನಾನು ವಾಸವಾಗಿದ್ದೇನೆ ದಯವಿಟ್ಟು ಕಡಿಯಬೇಡ"ಎಂದು ನುಡಿದ.ಆದರೆ ನೇಕಾರ ಕೇಳಲಿಲ್ಲ"ಬೇಕಿದ್ದರೆ ಬೇರೆ ಮರದಲ್ಲಿ ಹೋಗಿರು"ಎಂದು ಹೇಳಿದ."ಹಾಗಿದ್ದಲ್ಲಿ ನಿನಗೆ ಎರಡು ವರ ಕೊಡುವೆ ಏನು ಬೇಕಾದರೂ ಕೇಳಿಕೋ,ಆದರೆ ಮರವನ್ನು ಮುಟ್ಟಬೇಡ"ಎಂದು ಬೇಡಿದ. ಸರಿ ವರವನ್ನು ಏನು ಬೇಕೆಂದು ಕೇಳುವುದು? "ಇರು ನನ್ನ ಹೆಂಡತಿಯನ್ನು ಕೇಳಿ ಬರುತ್ತೇನೆ" ಎಂದು ಹೊರಟ.ದಾರಿಯಲ್ಲಿ ಆತಂಕ ತಡೆಯಲಾರದೆ ಒಬ್ಬ ಕುಂಬಾರನಿಗೆ ಹೇಳಿದ"ಅದಕ್ಕೆ ಆ ಬುದ್ಧಿವಂತ ಕುಂಬಾರ"ಹೆಚ್ಚು ಆಸ್ತಿ,ಮತ್ತು ದೊಡ್ಡ ಮನೆಯನ್ನು ಕೇಳಿಕೋ" ಎಂದ.ನೇಕಾರ ತನ್ನ ದಡ್ಡ ಹೆಂಡತಿ ಬಳಿ ಎಲ್ಲವನ್ನೂ ಹೇಳಿದ.ಆಕೆ "ಆಸ್ತಿ ಅಂತಸ್ತು ಬೇಡ,ನೇಯಲು ಇನ್ನೆರಡು ಕೈಗಳು ಮತ್ತೊಂದು ತಲೆಯನ್ನು ಪಡೆದುಕೊಳ್ಳಿ,ಹೆಚ್ಚುಹೆಚ್ಚು ನೇಯ್ದು ಹೆಚ್ಚು ಸಂಪಾದಿಸಬಹುದು!"ಎಂದು ಸಲಹೆ ಇತ್ತಳು.ಅದರಂತೆಯೇ "ನನಗೆ ನಾಲ್ಕು ಕೈಗಳೂ ಎರಡು ತಲೆಗಳೂ ಇರಲಿ"ಎಂದು ಕೇಳಿದ.ಯಕ್ಷ "ಅಸ್ತು" ಎಂದ. ನಂತರ ಮನೆಯ ಕಡೆಗೆ ನಡೆದು ಹೊರಟಿರಲು ಜನರು ಯಾವುದೂ ಭೂತವೋ,ಪ್ರೇತವೋ ಊರಿನೊಳಗೆ ಬರುತ್ತಿದೆ ಎಂದು ಕಲ್ಲು,ಕೋಲಿನಿಂದ ಬಾರಿಸಿದರು.ನೇಕಾರ ಕೈಕಾಲು ಮುರಿದುಕೊಂಡು ಕೆಲವೇ ದಿನಗಳಲ್ಲಿ ಪ್ರಾಣ ಬಿಟ್ಟ.
ನೀತಿ: ಸ್ವಂತ ನಿರ್ಧಾರ ಮಾಡಲಾರದವರು ಅನುಭವಿಗಳ ಸಲಹೆ ಪಡೆಯುವುದು ಜಾಣತನ.