ಜೋಡಿ ಗಿಣಿ

ದಟ್ಟವಾದ ಕಾಡಿನಲ್ಲಿ ಪ್ರಾಣಿ ಪಕ್ಷಿಗಳು ಹೇರಳವಾಗಿದ್ದವು.ಅಲ್ಲಿ ಎರಡು ಗಿಣಿಗಳೂ ವಾಸ ಮಾಡುತ್ತಿದ್ದವು.ದಿನಾಲೂ ದೂರ ದೂರ ಹಾರುತ್ತಾ ಹಣ್ಣು ಹುಡುಕುತ್ತಾ ಪಟ್ಟಣದ ಬಳಿಯೂ ಕಾಳು ಹೆಕ್ಕುತ್ತಾ ಜೀವಿಸುತ್ತಿದ್ದವು.ಅಲ್ಲಿ ಒಂದು ಸುಂದರ ಅರಮನೆ ಆ ಗಿಣಿಗಳಿಗೆ ಕಂಡಿತು.ಕುತೂಹಲದಿಂದ ಬಳಿಗೆ ಹೋಗಲು ಅಲ್ಲಿ ಹರಡಿದ್ದ ಕಾಳು ಧಾನ್ಯ ಕಂಡು ಆಸೆಯಿಂದ ತಿನ್ನಲು ಹೋಗಿ ಬಲೆಯಲ್ಲಿ ಸಿಕ್ಕು ಪಂಜರದ ಪಾಲಾಯಿತು.ಹೊತ್ತುಹೊತ್ತಿಗೆ ಹೊಟ್ಟೆತುಂಬಾ ಊಟ ಸಿಗುತ್ತಿತ್ತು, ರಾಜ ರಾಣಿಯರ ಪ್ರೀತಿಯೂ ದಕ್ಕಿತು.ಹೊರಗೆ ಸ್ವೇಚ್ಚೆಯಿಂದ ಹಾರಾಡುವ ಸ್ವಾತಂತ್ರ್ಯ ಕಳೆದುಕೊಂಡರೂ ಅರಮನೆಯವರ ಪ್ರೀತಿಯಿಂದ ಅಲ್ಲೇ ಸುಖವಾಗಿ ಇದ್ದವು.
ಒಂದುದಿನ ಅರಮನೆಗೆ ಒಂದು ಕೋತಿಯನ್ನು ಕರೆತರಲಾಯಿತು. ಅದರ ಜಿಗಿದಾಟ ನೆಗೆದಾಟ ಎಲ್ಲರ ಮನ ಸೆಳೆಯಿತು.ರಾಜರಾಣಿಯರೂ ಗಿಣಿಯ ಕಡೆ ಬರುವುದನ್ನು ಕಡಿಮೆ ಮಾಡಿ ಆ ಮಂಗನನ್ನೇ ನೋಡಿ ಹೋಗುತ್ತಿದ್ದರು.ಗಿಣಿಗಳಿಗೆ ಹೊತ್ತು ಹೊತ್ತಿಗೆ ಬೀಳುತ್ತಿದ್ದ ಊಟವೂ ಕಡಿಮೆಯಾಯಿತು.ಒಂದು ಗಿಣಿ ಮತ್ತೊಂದಕ್ಕೆ ಹೇಳಿತು "ನಾವು ಇಲ್ಲಿಂದ ತಪ್ಪಿಸಿಕೊಂಡು ಹಾರಿ ಹೋಗೋಣ,ನಾವು ಯಾರಿಗೂ ಬೇಡವಾಗಿದ್ದೇವೆ,ನಮ್ಮನು ಯಾರೂ ಇಷ್ಟಪಡುತ್ತಲೇ ಇಲ್ಲ ಆ ಕೋತಿ ಬಂದಾಗ್ಗಿನಿಂದ"ಎಂದಿತು.ಅದಕ್ಕೆ ಮತ್ತೊಂದು ಗಿಣಿ "ಗೆಳತಿ ತಾಳ್ಮೆ ಕಳೆದುಕೊಳ್ಳಬೇಡ ಇನ್ನೂ ಸ್ವಲ್ಪ ಸಮಯ ಕಾದು ನೋಡುವ,ತಿನ್ನಲು ಆಹಾರವೇ ಸಿಗದಿದ್ದರೆ ಆ ಯೋಚನೆ ಮಾಡುವ " ಎಂದಿತು. ಸ್ವಲ್ಪ ದಿನಗಳ ನಂತರ ಆ ಕೋತಿಯು ದೊಡ್ಡದಾಯಿತು ಅಂತೆಯೇ ಅದರ ಚೇಷ್ಟೆಯೂ ಅತಿಯಾಯಿತು,ಕಾಟವೂ ಹೆಚ್ಚಾಯಿತು,ನೋಡಲು ಬಂದವರ ಮೇಲೆ ಉಗುಳುವುದು,ಊಟ ಹಾಕಲು ಬಂದವರಿಗೇ ಪರಚುವುದೂ. ಎಲ್ಲವನ್ನೂ ಗಮನಿಸಿದ ರಾಜನು ಅದನ್ನು ಕಾಡಿಗೇ ಬಿಟ್ಟು ಬನ್ನಿ ಎಂದು ತನ್ನ ಸೇವಕರಿಗೆ ಹೇಳಿದನು.ಅದನ್ನು ಕಾಡಿಗೆ ಅಟ್ಟಿದ ನಂತರ ಗಿಣಿಗಳ ಕಡೆಗೇ ಎಲ್ಲರ ಗಮನ ಹರಿಯಿತು. ಪ್ರೀತಿ ಮೊದಲಿಗಿಂತಲೂ ಹೆಚ್ಚಾಯಿತು.ರಾಜ ರಾಣಿಯರ ಮತ್ತು ಎಲ್ಲರ ಪ್ರೀತಿಯಿಂದ ಗಿಣಿಗಳು ತಮ್ಮ ಜೀವನದ ಕಡೆಯ ವರೆಗೂ ಸಂತಸದಿಂದ ಬಾಳಿದವು.