ಮುಂದಾಲೋಚನೆ

ಸುಡುಬಿಸಿಲಿನಲ್ಲಿ ಹಸಿವಿನಿಂದ ಅತ್ತಿಂದಿತ್ತ ಆಹಾರಕ್ಕಾಗಿ ಹುಡುಕಾಡುತ್ತಾ ಜಿಗಿದಾಡುತ್ತಿದ್ದ ಮಿಡತೆಯೊಂದು ಸಣ್ಣ ಸಣ್ಣ ಇರುವೆಗಳು ಕಾಳುಗಳನ್ನು ಹೊತ್ತು ಸಾಲಾಗಿ ಹೋಗುತ್ತಿದ್ದುದು ಕಂಡಿತು.ಅವುಗಳ ಬಳಿಗೆ ಹೋಗಿ ತನಗೆ ಹಸಿವಾಗಿದೆ ಎಂದೂ ತನಗೂ ಒಂದೆರೆಡು ಕಾಳು ಕೊಡಲು ಕೇಳಿತು.ಆಗ ಇರುವೆಯೊಂದು "ಅಯ್ಯಾ ಮಿಡತೆ ನೀನು ಬೇಸಿಗೆಯಲ್ಲಿ ಏನು ಮಾಡುತ್ತಿದ್ದೆ, ಆಹಾರ ಕೂಡಿ ಇಡಲಿಲ್ಲವೇ?"ಎಂದಿತು.ಅದಕ್ಕೆ ಮಿಡತೆ "ಬೇಸಿಗೆ ನನಗೆ ಬಹಳ ಇಷ್ಟವಾದ ಸಮಯ ಆಗ ನಾನು ಹಾಡು ಹೇಳುತ್ತಾ ಕಾಲ ಕಳೆದೆ"ಎಂದಿತು. ಅದಕ್ಕೆ ಇರುವೆ "ಮೈಮರೆತು ಆಗ ಹಾಡುತ್ತಾ ಇದ್ದೆ, ಈಗ ಕುಣಿಯುತ್ತ ಬಿದ್ದಿರು"ಎಂದು ಮುಂದೆ ಸಾಗಿದವು. ಮಿಡತೆ ಮುಖ ಮುದುಡಿಕೊಂಡು ಮುಂದಕ್ಕೆ ಹಾರಿತು.