ಅತಿಥಿ ಸತ್ಕಾರ (ಹಾಸ್ಯ)

ಬಡವ ರಾಮಯ್ಯ ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದ.ಆತನಿಗೆ ಅತಿಥಿ ಎಂದರೆ ದೇವರ ಸಮಾನ. ಆತನ ಮನೆಗೆ ಬಂದವರಿಗೆ ಊಟ ಉಪಚಾರಕ್ಕೆ ಎಂದಿಗೂ ಮೋಸವಿರಲಿಲ್ಲ. ಇದನ್ನು ಅರಿತ ಕೆಲವು ನಂಟರು ಮತ್ತೆ ಮತ್ತೆ ಆತನ ಮನೆಗೆ ಊಟಕ್ಕೆ ಬರತೊಡಗಿದರು.ಆತನ ಹೆಂಡತಿಗೆ ಅಡುಗೆ ಮಾಡಿಹಾಕಿ ರೋಸಿ ಹೋಗಿತ್ತು.ಒಂದು ದಿನ ಮತ್ತದೇ ನಂಟರು ಮನೆಗೆ ಬಂದರು.ಆ ದಿನ ರಾಮಯ್ಯ ಮನೆಯಲ್ಲಿರಲಿಲ್ಲ.ಅವರ ಮನೆಯಲ್ಲಿ ಒಂದು ದೊಡ್ದ ಒರಳು ಮತ್ತು ಒನಕೆ ಇತ್ತು.ಅದಕ್ಕೆ ಹೂವು,ಅರಿಶಿನ ಕುಂಕುಮ ಅಲಂಕಾರ ಮಾಡಲಾಗಿತ್ತು.ಅವರು "ಇದೇನಿದು?" ಎಂದರು.ಅದಕ್ಕೆ ರಾಮಯ್ಯನ ಹೆಂಡತಿ "ನಮ್ಮೆಜಮಾನರು ಈಗ ಒನಕೆ ವ್ರತ ಮಾಡುತ್ತಿದ್ದಾರೆ,ಮನೆಗೆ ಬಂದವರಿಗೆ ಊಟದ ನಂತರ ಎರಡೆರೆಡು ಲಾತ ಕೊಡುತ್ತಾರೆ"ಎಂದಳು. ಕೂಡಲೇ ಎಲ್ಲಾ ನಂಟರು ಓಡತೊಡಗಿದರು.ಅದೇವೇಳೆಗೆ ಮನೆಗೆ ಬಂದ ರಾಮಯ್ಯ ನಂಟರು ಓಡುತ್ತಿರುವುದನ್ನು ಕಂಡು ಏಕೆಂದು ಹೆಂಡತಿಯನ್ನು ಕೇಳಿದನು.ಅದಕ್ಕೆ ಆತನ ಹೆಂಡತಿ"ಅವರಿಗೆ ಈ ಒನಕೆ ಬೇಕಂತೆ,ಕೊಡಲ್ಲ ಎಂದದಕ್ಕೆ ಓಡಿ ಹೋಗ್ತಿದ್ದಾರೆ"ಎಂದಳು.ರಾಮಯ್ಯ ಒನಕೆ ಹಿಡಿದು ಅವರ ಹಿಂದೆ ತಾನೂ ಓಡಿದ. ನಂಟರು"ಅಯ್ಯೋ ರಾಮಯ್ಯ ಒನಕೆ ಹಿಡಿದು ಬರ್ತಿದ್ದಾನೆ ಓಡಿ, ಜೋರಾಗಿ ಓಡಿ"ಎಂದು ರಾಮಯ್ಯನ ಕಣ್ಣು ತಪ್ಪಿಸಿ ದೂರ ಸಾಗಿದರು.ಮತ್ತೆ ಆತನ ಮನೆಯಕಡೆ ತಲೆ ಹಾಕುವ ಸಾಹಸ ಮಾಡಲಿಲ್ಲ.