ಬೆಂಕಿ-ಗಾಳಿ !

ಚೀನಾ ದೇಶದ ಒಂದು ಹಳ್ಳಿಯಲ್ಲಿ ಒಬ್ಬ ಗಂಡನಿಲ್ಲದ ಮುದುಕಿಗೆ ಇಬ್ಬರು ಗಂಡು ಮಕ್ಕಳು. ಅವಳ ಸೊಸೆಯರು ತಮ್ಮ ತವರೂರಿಗೆ ಹೋಗಿ ಬರಲು ಅತ್ತೆಯ ಬಳಿ ಕೋರಿಕೊಂಡರು.ಮುದುಕಿಗೆ ಅವರನ್ನು ಕಳಿಸಲು ಇಷ್ಟವಿರಲಿಲ್ಲ."ನೀವು ನಿಮ್ಮ ಅಮ್ಮನ ಮನೆಗೆ ಹೋಗಿ ಬರಲು ನನಗೆ ಅಭ್ಯಂತರವಿಲ್ಲ ಆದರೆ ಹಿಂತಿರುಗಿ ಬರುವಾಗ ದೊಡ್ದ ಸೊಸೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಯನ್ನೂ, ಚಿಕ್ಕ ಸೊಸೆ ಕಾಗದದಲ್ಲಿ ಸುತ್ತಿಟ್ಟ ಗಾಳಿ ಈ ಎರಡೂ ಉಡುಗೊರೆಯನ್ನು ತರಬೇಕು, ಇಲ್ಲದಿದ್ದರೆ ಇಲ್ಲಿಗೆ ಬರಲೇಬೇಡಿ"ಎಂದು ಶರತ್ತು ಹಾಕಿದಳು. ತಮ್ಮ ತವರೂರಿಗೆ ಹೋಗುವ ತವಕದಲ್ಲಿ ಅವರೂ ಸಹ ಅದಕ್ಕೆ ಒಪ್ಪಿ ಹೊರಟರು. ಊರಿನಲ್ಲಿ ತಮ್ಮ ನಂಟರೂ ಇಷ್ಟರೂ ಎಲ್ಲರೊಡನೆ ಸಂತೋಷದಿಂದ ಕಾಲ ಕಳೆದು ಹಿಂತಿರುಗಿ ಬರುವಾಗ ಅವರಿಗೆ ಅತ್ತೆ ಹೇಳಿದ್ದ ಮಾತು ನೆನೆಪಿಗೆ ಬಂದಿತು. ತಲೆಯ ಮೆಲೆ ಕೈಯಿಟ್ಟು ಆಲೋಚನೆ ಮಾಡುತ್ತಾ ಕುಳಿತರು.ಆ ವೇಳೆಗೆ ಸರಿಯಾಗಿ ವಾಂಗ್ ಚೂ ಎನ್ನುವ ಜಾಣ ರೈತ ಅವರನ್ನು ಕಂಡು,ಅವರ ಕಷ್ಟ ವಿಚಾರಿಸಿದ.ಸ್ವಲ್ಪ ಕಾಲ ಆತನೂ ಆಲೋಚಿಸಿ ನಂತರ ಜಾಣ್ಮೆಯಿಂದ ಅವರಿಗೆ ಬೇಕಿದ್ದ ಉಡುಗೊರೆಗಳನ್ನು ಅವರ ಕೈಗಿಟ್ಟ. ಅದನ್ನು ಸಂತೋಷದಿಂದ ತಂದು ಸೊಸೆಯರು ಅತ್ತೆಗೆ ಒಪ್ಪಿಸಿದರು.ಮುದುಕಿಗೆ ಆಶ್ಚರ್ಯ ಯಾವ ಕೆಲಸವು ಅಸಾಧ್ಯ ಎಂದುಕೊಂಡಿದ್ದಳೋ ಸೊಸೆಯರಿಗೆ ಸುಲಭವಾಗಿ ಸಾಧ್ಯವಾಯಿತು.ಆದರೆ ಅವರಿಗೆ ಸಹಾಯ ಮಾಡಿದ ವಾಂಗ್ ಚೂ ವಿಚಾರ ಮುದುಕಿಯ ಬಳಿ ಬಾಯಿ ಬಿಡಲಿಲ್ಲ. ವಾಂಗ್ ಚೂ ದೊಡ್ದ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಗೆ - ಚೈನೀಸ್ ಲಾಟಿನ್ ಮತ್ತು ಚಿಕ್ಕ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಗಾಳಿಗೆ - ಕೈ ಬೀಸಣಿಗೆ ಕೊಟ್ಟಿದ್ದ.