ಭಾಸಕವಿ ಮತ್ತು ಊರುಭಂಗ

ಪ್ರಾಚೀನ ಸಂಸ್ಕೃತ ನಾಟಕಕಾರರಲ್ಲಿ ಭಾಸನು ಅಗ್ರಗಣ್ಯ. ಈತನು ಕಾಳಿದಾಸನಿಗಿಂತಲೂ ಹಿಂದಿನವನೆಂದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಿಂದ ತಿಳಿದು ಬರುತ್ತದೆ. ಆ ಪ್ರಸ್ತಾವನೆಯ ಒಂದು ಭಾಗ ಈ ರೀತಿ ಇದೆ:
ಸೂತ್ರಧಾರ: ಈ ವಸಂತೋತ್ಸವಕ್ಕೆ, ಕಾಳಿದಾಸನು ರಚಿಸಿರುವ ‘ಮಾಲವಿಕಾಗ್ನಿಮಿತ್ರ’ ಎಂಬ ನಾಟಕವನ್ನು ಪ್ರದರ್ಶಿಸಬೇಕೇಂದು ಪ್ರೇಕ್ಷಕರು ಕೇಳಿದ್ದಾರೆ. ಆದ್ದರಿಂದ ಸಂಗೀತವು ಪ್ರಾರಂಭವಾಗಲಿ.
ನಟ:, ಇಲ್ಲ, ಇಲ್ಲ. ಅಪಾರ ಕೀರ್ತಿವಂತರಾದ ಭಾಸ, ಸೌಮಿಲ್ಲ, ಕವಿಪುತ್ರ ಮುಂತಾದವರ ಕೃತಿಗಳಿರುವಾಗ, ಈ ವರ್ತಮಾನ ಕಾಲದ ಕಾಳಿದಾಸನ ರಚನೆಗೆ ಏಕಿಷ್ಟು ಗೌರವ?
ಕಾಳಿದಾಸನು ಸುಮಾರು ನಾಲ್ಕನೆಯ ಶತಮಾನದಲ್ಲಿದ್ದವನು. ಈ ಮೇಲಿನ ಕಾರಣದಿಂದಲೂ, ಭಾಸನ ನಾಟಕಗಳನ್ನು ವಿಸ್ತರಿಸಿ ಇತರರು ಇನ್ನೂ ದೀರ್ಘವಾದ ನಾಟಕಗಳನ್ನು ಬರೆದಿರುವುದರಿಂದಲೂ ಮತ್ತಿತರ ಪ್ರಮಾಣಗಳಿಂದಲೂ ಭಾಸನ ಕಾಲ ಸುಮಾರು ಒಂದು ಅಥವ ಎರಡನೆಯ ಶತಮಾನವೆಂದು ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಭಾಷಾಜ್ಞಾನಿಗಳು ನಿರ್ಧರಿಸಿದ್ದಾರೆ. ಎಂದರೆ ಈ ಕವಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದಿನವನು.
ಕಾಳಿದಾಸನಲ್ಲದೆ, ಬಾಣನು (ಆರನೆಯ ಶತಮಾನ) ತನ್ನ ‘ಹರ್ಷಚರಿತೆ’ಯಲ್ಲಿ ಭಾಸನನ್ನು ಪ್ರಶಂಸಿಸಿದ್ದಾನೆ. ಜಯದೇವನು (ಹನ್ನೆರಡನೆಯ ಶತಮಾನ) ತನ್ನ ‘ಪ್ರಸನ್ನರಾಘವ’ ಎಂಬ ನಾಟಕದಲ್ಲಿ ಈತನನ್ನು ‘ಕವಿಕುಲಗುರು’ ಎಂದು ಕರೆದಿದ್ದಾನೆ. ಭಾಸನು ಎಷ್ಟೇ ಪ್ರಸಿದ್ಧನಾಗಿದ್ದರೂ ಅವನ ಕೃತಿಗಳೆಲ್ಲವೂ ಕಾಲಾಂತರದಲ್ಲಿ ಕಣ್ಮರೆಯಾಗಿ, ಇಪ್ಪತ್ತನೆಯ ಶತಮಾನದ ಆರಂಭವಾಗುವ ವೇಳೆಗೆ ಅವನ ಒಂದು ನಾಟಕವೂ ಲಭ್ಯವಿಲ್ಲದಂತಾಗಿತ್ತು. ಹೀಗಿರುವಾಗ, ೧೯೧೨ ರಲ್ಲಿ, ತಿರುವನಂತಪುರದಲ್ಲಿ ತಿರುವಾಂಕೂರು ಪ್ರಾಚ್ಯ ಹಸ್ತಪ್ರತಿಗಳ ಲೈಬ್ರರಿಯ ಮೇಲ್ವಿಚಾರಕರಾಗಿದ್ದ ಮಹಾಮಹೋಪಾಧ್ಯಾಯ ಶ್ರೀ ಗಣಪತಿಶಾಸ್ತ್ರಿಗಳು ಅವರಿಗೆ ದೊರಕಿದ, ಮಲೆಯಾಳಮ್ ಅಕ್ಷರಗಳಲ್ಲಿ ಬರೆದಿದ್ದ, ಭಾಸನ ಹದಿಮೂರು ನಾಟಕಗಳನ್ನು ಪರಿಷ್ಕರಿಸಿ ಸಂಸ್ಕೃತದಲ್ಲಿ ಪ್ರಕಟಿಸಿದರು. ಈ ಪ್ರಕಟಣೆ ಭಾರತದ ಪ್ರಾಚೀನ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎಂಬುದರಲ್ಲಿ ಸಂಶಯವಿಲ್ಲ.
ಭಾಸನ ಹದಿಮೂರು ನಾಟಕಗಳನ್ನು ಈ ವಿಧವಾಗಿ ವಿಭಾಗಿಸಬಹುದು:
• ಮಾಹಾಭಾರತದ ಘಟನೆಗಳನ್ನೂ, ಪಾತ್ರಗಳನ್ನೂ ಉಪಯೋಗಿಸಿ ಬರೆದವು ಆರು: ಮಧ್ಯಮವ್ಯಾಯೋಗ, ದೂತ ಘಟೋತ್ಕಚ, ದೂತವಾಕ್ಯ, ಕರ್ಣಭಾರ, ಪಂಚರಾತ್ರ ಮತ್ತು ಊರುಭಂಗ.
• ರಾಮಾಯಣದ ನಾಟಕಗಳು ಎರಡು: ಪ್ರತಿಮಾ ನಾಟಕ ಮತ್ತು ಅಭಿಷೇಕ
• ಹರಿವಂಶದಲ್ಲಿನ ಕೃಷ್ಣನ ಕಥೆಯನ್ನು ಅವಲಂಬಿಸಿ ಬರೆದ ಬಾಲಚರಿತ
• ಆಗಿನ ಕಾಲದ ಚರಿತ್ರೆ ಮತ್ತು ಪ್ರಚಲಿತ ಜನಪದ ಕಥೆಗಳ ನಾಟಕೀಕರಣಗಳು ನಾಲ್ಕು: ಸ್ವಪ್ನವಾಸವದತ್ತ, ಪ್ರತಿಜ್ಞಾಯೌಗಂಧರಾಯಣ, ಅವಿಮಾರಕ ಮತ್ತು ಚಾರುದತ್ತ.
ಮೇಲಿನ ಎಂಟು ನಾಟಕಗಳು ಮಹಾಭಾರತ ಮತ್ತು ರಾಮಾಯಣ ಗಳನ್ನು ಅವಲಂಬಿಸಿದ್ದರೂ, ಭಾಸನು ತನ್ನ ನಾಟಕಗಳಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಿದ್ದಾನೆ. ಅಲ್ಲದೆ ಹೊಸ ಪಾತ್ರಗಳನ್ನೂ ಸೃಷ್ಟಿಸಿದ್ದಾನೆ. ಊರುಭಂಗವು ಅವನ ರಚನಾ ಕೌಶಲ್ಯಕ್ಕೆ ಒಂದು ಉತ್ತಮ ಉದಾಹರಣೆ.
ಸಂಸ್ಕೃತದಲ್ಲಿ ‘ಊರು’ ಎಂದರೆ ತೊಡೆ. ಊರುಭಂಗವೆಂದರೆ ಮುರಿದುಬಿದ್ದ (ಭಗ್ನವಾದ) ತೊಡೆಗಳು. ಹೆಸರೇ ಸೂಚಿಸುವಂತೆ ಈ ನಾಟಕ ಮಹಾಭಾರತದ ಗದಾಯುದ್ಧ ಮತ್ತು ಅನಂತರದ ದುರ್ಯೋಧನನ ಅವಸಾನವನ್ನು ಕುರಿತದ್ದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಕೇಶವನ ಸಂಕೇತವನ್ನು ಅರ್ಥ ಮಾಡಿಕೊಂಡು ಭೀಮಸೇನನು, ಅದು ಅಧರ್ಮವಾಗಿದ್ದರೂ ಕೂಡ, ದುರ್ಯೋಧನನ ತೊಡೆಗಳಿಗೆ ಗದೆಯಿಂದ ಹೊಡೆದು ಅವನನ್ನು ಬೀಳಿಸಿದ ಕ್ಷಣವೇ, ದುರ್ಯೋಧನನ ಅಹಂಕಾರ, ದ್ವೇಷ ಮತ್ತು ಸೇಡು ತೀರಿಸುವ ಹಟ ಎಲ್ಲವೂ ಮಾಯವಾಗಿ ಅವನು ಉದಾರ ಮನಸ್ಸಿವನಾಗುತ್ತಾನೆ. ಈ ಬಗೆಯ ಮಾರ್ಪಾಟು ಮೂಲ ಭಾರತದಲ್ಲಿ ಕಂಡು ಬರುವುದಿಲ್ಲ. ಈ ಬಗೆಯ ಪರಿವರ್ತನೆ ಆದದ್ದರಿಂದಲೇ ಅವನು ಭೀಮನ ದ್ರೋಹದಿಂದ ಕುಪಿತನಾಗಿ ಭೀಮನನ್ನೂ, ಪಾಂಡವರನ್ನೂ ಕೊಲ್ಲಲು ಹೊರಟಿದ್ದ ಬಲರಾಮನನ್ನು ತಡೆಯುತ್ತಾನೆ. ವ್ಯಾಸರ ಮಹಾಭಾರತದಲ್ಲಿ ಬಲರಾಮನನ್ನು ತಡೆದವನು ದುರ್ಯೋಧನನಲ್ಲ, ಕೃಷ್ಣ. ಈ ನಾಟಕದಲ್ಲಿ ಅನಂತರ ಬರುವ ದುರ್ಜಯ (ಇವನು ದುರ್ಯೋಧನನ ಮಗ; ನಾಲ್ಕೈದು ವರ್ಷದ ಹಸುಳೆ; ಇವನ ಪಾತ್ರವೇ ಮಹಾಭಾರತದಲ್ಲಿಲ್ಲ) ಮತ್ತು ದುರ್ಯೋಧನರ ರಣಭೂಮಿಯಲ್ಲಿ ಸಂಧಿಸುವಿಕೆ ಮತ್ತು ಸಂವಾದ ಬಹಳ ಹೃದಯಸ್ಪರ್ಶಿಯಾಗಿದೆ. ಆ ಭಾಗವನ್ನು ಮಾತ್ರ ಇಲ್ಲಿ ಭಾಷಾಂತರ ಮಾಡಲಾಗಿದೆ:
ಕುರುಡನಾದ ಧೃತರಾಷ್ಟ್ರ, ಕಣ್ಣಿದ್ದೂ ಅಂಧತ್ವವನ್ನು ಸ್ವೀಕರಿಸಿರುವ ಗಾಂಧಾರಿ ಮತ್ತು ಅವರ ಹಿಂದೆ ದುರ್ಯೋಧನನ ರಾಣಿಯರಾದ ಮಾಲವಿ ಮತ್ತು ಪೌರವಿಯರು ದುರ್ಯೋಧನನ್ನು ಅರಸುತ್ತ ಕುರುಕ್ಷೇತ್ರದಲ್ಲಿ ನಡೆದು ಬರುತ್ತಿದ್ದಾರೆ. ಇದು ಹೇಗೆ? ಈ ಸಂಭಾಷಣೆಯನ್ನು ನೋಡಿ.
ಧೃತರಾಷ್ಟ್ರ: ನನ್ನನ್ನು ನಡೆಸುಕೊಂಡು ಬರುತ್ತಿರುವವರು ಯಾರು - ನನ್ನ ಧೋತ್ರದ ಸೆರಗನ್ನು ಎಳೆಯುತ್ತ? ದುರ್ಜಯ: ತಾತ, ನಾನು ದುರ್ಜಯ.
ಧೃತರಾಷ್ಟ್ರ: ಹೋಗು ಮಗು, ನಿನ್ನ ತಂದೆಯನ್ನು ಹುಡುಕು.
ದುರ್ಜಯ: ಆದರೆ ನನಗೆ ದಣಿವಾಗಿದೆ, ಅಜ್ಜ.
ಧೃತರಾಷ್ಟ್ರ: ಹೋಗಿ ನಿನ್ನ ತಂದೆಯ ಮಡಿಲಲ್ಲಿ ವಿಶ್ರಮಿಸಿಕೊ.
ದುರ್ಜಯ: ಇದೋ, ಹೊರಟೆ (ಹೋಗುತ್ತ) ಅಪ್ಪಾ, ನೀನೆಲ್ಲಿರುವೆ?
ದುರ್ಯೋಧನ: ಅಯ್ಯೋ ಈ ಕಂದನೂ ಬಂದನು. ಯಾವ ಸನ್ನಿವೇಶದಲ್ಲಾದರೂ ಇರುವ ಮಗನ ಮೇಲಿನ ಪ್ರೇಮ ಈಗ ನನ್ನ ಹೃದಯವನ್ನು ಸುಡುತ್ತಿದೆ. ದುರ್ಜಯನು ಎಂದೂ ದುಃಖವನ್ನು ಬಲ್ಲವನಲ್ಲ, ನನ್ನ ಮಡಿಲಿನ ಸುಖವನ್ನೇ ಕಂಡವನು. ಈ ದೆಸೆಯಲ್ಲಿ ನನ್ನನ್ನು ನೋಡಿ ಏನು ಹೇಳುವನು?
ದುರ್ಜಯ: ಮಹಾರಾಜನು ಇಲ್ಲಿರುವನು. ನೆಲದ ಮೇಲೆ ಕುಳಿತಿದ್ದಾನೆ.
ದುರ್ಯೋಧನ: ಮಗೂ, ಇಲ್ಲಿಗೇಕೆ ಬಂದೆ?
ದುರ್ಜಯ: ನೀನು ಹೋಗಿ ಬಹಳ ಸಮಯವಾಗಿತ್ತು, ಅದಕ್ಕೇ ಬಂದೆ.
ದುರ್ಯೋಧನ: (ಸ್ವಗತ) ಈ ಅವಸ್ಥೆಯಲ್ಲೂ ಪುತ್ರಸ್ನೇಹವು ನನ್ನ ಹೃದಯವನ್ನು ದಹಿಸುತ್ತಿದೆ.
ದುರ್ಜಯ: ನಾನು ನಿನ್ನ ತೊಡೆಯಲ್ಲಿ ಕುಳಿತುಕೊಳ್ಳುತ್ತೇನೆ (ಹಾಗೆಯೇ ಮಾಡಲು ಹೋಗುತ್ತಾನೆ)
ದುರ್ಯೋಧನ: (ಅವನನ್ನು ತಡೆಯುತ್ತ) ದುರ್ಜಯ! ದುರ್ಜಯ! ಹಾ ಕಷ್ಟ! ಯಾವನು ನನ್ನ ಎದೆಯಲ್ಲಿ ಪ್ರೀತಿಯನ್ನುಂಟು ಮಾಡುತ್ತಿದ್ದನೋ, ಯಾವನು ನನ್ನ ಕಣ್ಣುಗಳಿಗೆ ಹಬ್ಬವಾಗಿದ್ದನೋ ಅದೇ ಚಂದ್ರನು ಈಗ ಅಗ್ನಿಯಂತಾಗಿದ್ದಾನೆ.
ದುರ್ಜಯ: ನಿನ್ನ ಮಡಿಲಲ್ಲಿ ಕುಳಿತುಕೊಳ್ಳುವುದನ್ನು ಏಕೆ ತಡೆಯುತ್ತಿ?
ದುರ್ಯೋಧನ: ಇಂದಿನಿಂದ ಇದು ನಿನಗೆ ಆಸನವಲ್ಲ. ಈ ಪರಿಚಿತವಾದ ಪೀಠವನ್ನು ಬಿಟ್ಟು ಬೇರೆ ಎಲ್ಲಾದರೂ ಕುಳಿತುಕೊಳ್ಳುವುದು.
ದುರ್ಜಯ: ಏಕೆ? ಮಹಾರಾಜನು ಎಲ್ಲಿ ಹೋಗುತ್ತಿದಾನೆ?
ದುರ್ಯೋಧನ: ನನ್ನ ನೂರು ಸೋದರರಿರುವಲ್ಲಿಗೆ.
ದುರ್ಜಯ: ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು.
ದುರ್ಯೋಧನ: ಹೋಗು ಮಗು. ವೃಕೋದರ (ಭೀಮ) ನನ್ನು ಕೇಳು.
ದುರ್ಜಯ: ಮಹಾರಾಜ, ಬಾ. ನಿನ್ನನ್ನು ಕರೆಯುತ್ತಿದ್ದಾರೆ.
ದುರ್ಯೋಧನ: ಯಾರು ಕರೆಯುತ್ತಿದ್ದಾರೆ?
ದುರ್ಜಯ: ಅಜ್ಜ. ಅಜ್ಜಿ ಮತ್ತು ರಾಣಿಯರು.
ದುರ್ಯೋಧನ: ನಾನು ಬರಲಾರೆ, ನೀನು ಹೋಗು ಮಗು.
ದುರ್ಜಯ: ನಾನು ನಿನ್ನನ್ನು ಕರೆದೊಯ್ಯುತ್ತೇನೆ.
ದುರ್ಯೋಧನ: ನೀನು ಇನ್ನೂ ಚಿಕ್ಕ ಹುಡುಗ.
ದುರ್ಜಯ (ಸುತ್ತ ನಡೆಯುತ್ತ): ತಾಯಂದಿರಾ! ಮಹಾರಾಜನು ಇಲ್ಲಿದ್ದಾನೆ
ಇದಾದ ನಂತರ ದುರ್ಯೋಧನನು ಧೃತರಾಷ್ಟ್ರನನ್ನೂ ಗಾಂಧಾರಿಯನ್ನೂ ಸಮಾಧಾನಗೊಳಿಸಿ, ತನ್ನ ಇಬ್ಬರು ಪತ್ನಿಯರಿಗೆ ಸಾಂತ್ವನದ ಮಾತುಗಳನ್ನಾಡಿ ದುಃಖಿಸಕೂಡದೆಂದು ಹೇಳುತ್ತಾನೆ; ಮಾಲವಿಯು ‘ನಾನು ಇನ್ನೂ ಚಿಕ್ಕವಳು, ನಿನ್ನ ಧರ್ಮಪತ್ನಿ; ಅಳದೆ ಹೇಗಿರಲಿ?’ ಎಂದು ಕೇಳುತ್ತಾಳೆ. ಪೌರವಿಯು ‘ನಾನು ನಿನ್ನೊಡನೆ ಬರಲು ನಿಶ್ಚಯಿಸಿದ್ದೇನೆ. ಆದ್ದರಿಂದ ಅಳುವುದಿಲ್ಲ’ ಎನ್ನುತ್ತಾಳೆ. ಮುಂದೆ ದುರ್ಜಯನಿಗೆ ಈ ಬುದ್ಧಿವಾದ ಮಾಡುತ್ತಾನೆ:
ದುರ್ಯೋಧನ: ನೀನು ನನ್ನ ಮಾತನ್ನು ಕೇಳುವಂತೆಯೇ ಪಾಂಡವರ ಮಾತನ್ನೂ ಕೇಳಬೇಕು. ತಾಯಿ ಕುಂತಿಯ ಅಪ್ಪಣೆಗಳನ್ನು ಸದಾ ಪಾಲಿಸಬೇಕು. ಅಭಿಮನ್ಯುವಿನ ತಾಯಿಯನ್ನೂ. ದ್ರೌಪದಿಯನ್ನೂ ನಿನ್ನ ತಾಯಿಯಂತೆಯೇ ಪೂಜಿಸಬೇಕು. ಶ್ಲಾಘ್ಯನೂ, ಅಭಿಮಾನಿಯೂ ಆಗಿದ್ದ ನಿನ್ನ ತಂದೆ ದುರ್ಯೋಧನನು ಸಮಾನ ಬಲಶಾಲಿಯನ್ನು ಎದುರಿಸಿ ಯುದ್ಧದಲ್ಲಿ ಹತನಾದನು ಎಂದು ತಿಳಿದು ಶೋಕವನ್ನು ತ್ಯಜಿಸು. ರೇಷ್ಮೆಯ ವಸ್ತ್ರವನ್ನು ಹೊದ್ದಿರುವ ಯುಧಿಷ್ಠಿರನ ವಿಪುಲವಾದ ಭುಜವನ್ನು ಮುಟ್ಟುತ್ತಾ ಪಾಂಡವರೊಂದಿಗೆ ನೀನೂ ನನಗೆ ತರ್ಪಣ ಕೊಡಬೇಕು.
ಹೀಗೆ ಎಲ್ಲರನ್ನು ಸಮಾಧಾನ ಮಾಡಿದರೂ, ತನ್ನ ತಂದೆಯು ವಂಚನೆಯಿಂದ ಹತನಾದದ್ದನ್ನೂ, ತನ್ನ ಒಡೆಯನಿಗೆ ಆದ ದ್ರೋಹವನ್ನೂ ಮರೆಯದೆ ಕೋಪದಿಂದ ಕುದಿಯುತ್ತಿದ್ದ ಅಶ್ವತ್ಥಾಮನನ್ನು ಮಾತ್ರ ಸಂತಯಿಸುವುದಕ್ಕಾಗದೆ, ದುರ್ಯೋಧನನು ಸ್ವರ್ಗಸ್ಥನಾಗುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ಮಹಾಭಾರತದಲ್ಲಿರುವಂತೆ ಅಶ್ವತ್ಥಾಮನು ತನ್ನ ಕಗ್ಗೊಲೆಯನ್ನು ತೀರಿಸಿ ಬರುವವರೆಗೂ ದುರ್ಯೋಧನನು ಜೀವವನ್ನು ಹಿಡಿದುಕೊಂಡಿರುವುದಿಲ್ಲ.