ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಜ್ಞಾನೋದಯ

picture

 à²ˆ ಕಥೆಯನ್ನು ಮೂಲತಃ, ತಮಿಳಿನಲ್ಲಿ ಬರೆದವರು, ಭಾರತದ ಏಕೈಕ ಭಾರತೀಯ Governor General ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು. ಕಥೆ Charles Dickens ನ A Christmas Carol ಎಂಬ ನೀಳ್ಗತೆಯನ್ನು ನೆನಪಿಗೆ ತರುತ್ತಾದರೂ, ಇದರಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ನೆನಪಿನಲ್ಲಿಡಬೇಕಾದ ಇನ್ನೊಂದು ಮಾತೇನೆಂದರೆ, ಈ ಕಿರುಗತೆಯನ್ನು ಬರೆದದ್ದು ಸುಮಾರು ಎಂಭತ್ತು ವರ್ಷಗಳ ಹಿಂದೆ.

ಅಂದು ಗೋಕುಲಾಷ್ಟಮಿ ರಾತ್ರಿ. ರಾಜುಲು ಚೆಟ್ಟಿಯಾರರು ತಮ್ಮ ಕೊಠಡಿಯನ್ನು ಒಳಗಿಂದ ಭದ್ರವಾಗಿ ಮುಚ್ಚಿ ಹಣದ ನೋಟುಗಳನ್ನು ತಿಜೋರಿಯಲ್ಲಿ ಇಡುತ್ತಿದ್ದರು. ಆಮೇಲೆ ತಿಜೋರಿಗೆ ಬೀಗ ಹಾಕಿ ಏಳುವಾಗ "ಗೋವಿಂದಾ" ಎಂದರು. ಅವರು "ಗೋವಿಂದಾ" ಎಂದುದು ದೇವರ ಮೇಲಿನ ಭಕ್ತಿಯಿಂದಲೇನೂ ಅಲ್ಲ. ಅವರಿಗೆ ಸಂಧಿವಾತ. ಬಹಳ ಹೊತ್ತು ನೆಲದ ಮೇಲೆ ಕುಳಿತದ್ದರಿಂದ ಏಳುವುದು ಕಷ್ಟವಾಯಿತು. ಅದಕ್ಕೆ ಅವರಿಗೆ ಅರಿವಿಲ್ಲದೆಯೇ "ಗೋವಿಂದಾ" ಎಂಬ ನಾಮವು ಅವರ ಬಾಯಿಯಿಂದ ಹೊರಬಿದ್ದಿತು. ಮರುಕ್ಷಣದಲ್ಲಿಯೇ, ಅವರ ಮುಂದೆ ಶ್ಯಾಮವರ್ಣನಾದ ಬಾಲಕೃಷ್ಣನು ನಿಂತಿದ್ದನು. ಚೆಟ್ಟಿಯಾರರಿಗೆ ಯಾರೋ ಕಳ್ಳನು ಬಂದಿದ್ದಾನೆ ಎಂದು ಗಾಬರಿಯಾಯಿತು. "ಯಾರು ನೀನು? ಒಳಗೆ ಹೇಗೆ ಬಂದೆ?" ಎಂದು ಕೇಳಿದರು. ಕೃಷ್ಣನು "ನಾನು ಗೋವಿಂದ, ನೀವು ಕರೆದಿರಿ ನಾನು ಬಂದೆ" ಎಂದನು. ಆಗ ಮುಚ್ಚಿದ ಬಾಗಿಲು ಹಾಗೆಯೇ ಇದ್ದುದು ಅವರ ಗಮನಕ್ಕೆ ಬಂದು ಚೆಟ್ಟಿಯಾರರು ಇನ್ನೂ ಗಾಬರಿಗೊಂಡು ಮೂರ್ಛಿತರಾದರು.

ಅವರಿಗೆ ಎಚ್ಚರವಾದಾಗ, ಕೃಷ್ಣನು ಅಲ್ಲಿಯೇ ಇದ್ದನು. ಆದರೆ ಈ ಸಲ ಅವನು ಕಾಣಿಸಿಕೊಂಡದ್ದು ಶಂಖ ಚಕ್ರ ಗದಾ ಪದ್ಮಧಾರಿಯಾದ ಶ್ರೀಮನ್ನಾರಾಯಣನಂತೆ. ಮನೆಯ ಕ್ಯಾಲೆಂಡರಿನಲ್ಲಿದ್ದ ಮಹಾವಿಷ್ಣುವಿನ ಚಿತ್ರದ ನೆನಪಾಗಿ, ಚೆಟ್ಟಿಯಾರರಿಗೆ ಭಗವಂತನು ನಿಜವಾಗಿ ಪ್ರತ್ಯಕ್ಷನಾಗಿದ್ದಾನೆ ಎಂಬ ಅರಿವು ಮೂಡಿತು. ಪರಮಾತ್ಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಧನ್ಯನಾದೆ ಎಂದರು. ಇನ್ನು ಮುಂದೆಯೂ ಹೀಗೆಯೇ ನನ್ನ ಮೇಲೆ ಅನುಗ್ರಹ ತೋರಬೇಕು ಎಂದರು. ದೇವರು "ಹಾಗಾದರೆ ನೀನು ಮಾಡಬೇಕಾದುದು ಇಷ್ಟೆ. ಹಣದ ಮೇಲೆ ನಿನಗಿರುವ ಅತಿಯಾದ ವ್ಯಾಮೋಹವನ್ನು ತೊರೆದುಬಿಡು" ಎಂದನು.

ಅಷ್ಟು ಹೊತ್ತಿಗೆ ರಾತ್ರಿ ಊಟದ ಸಮಯ ಮೀರಿದ್ದರಿಂದ, ಚೆಟ್ಟಿಯಾರರ ಹೆಂಡತಿಯೂ ಅವರ ಮೊಮ್ಮಗನೂ ಕೊಠಡಿಯ ಬಾಗಿಲನ್ನು ದಬದಬ ತಟ್ಟಿದರು. ಉತ್ತರ ಬರದಿದ್ದರಿಂದ ಮನೆಯಾಳುಗಳು ಸೇರಿ ಇನ್ನೂ ಜೋರಾಗಿ ತಟ್ಟಿದರು, ಹೆಸರು ಹಿಡಿದು ಕೂಗಿದರು. ಈ ಗಲಾಟೆಯಲ್ಲಿ ಶ್ರೀಕೃಷ್ಣನು ಅಂತರ್ಧಾನನಾದನು. ಚೆಟ್ಟಿಯಾರರು ಬಾಗಿಲು ತೆರೆದು ಹೊರ ಬಂದರು. ಎಲ್ಲರೂ "ಏನಾಯಿತು? ಏನಾಯಿತು?" ಎಂದು ಆತಂಕದಿಂದ ಕೇಳಿದರು. ರಾಜುಲು ಅವರು "ಏನೂ ಇಲ್ಲ" ಎಂದು ಅವರನ್ನು ಸಮಾಧಾನ ಮಾಡಿದರು.

ಚೆಟ್ಟಿಯಾರರು ವಾಸವಾಗಿದ್ದ ಬೀದಿಯಲ್ಲಿ ಒಂದು ದೇವಸ್ಥಾನವಿತ್ತು. ಅಲ್ಲಿ ಆ ರಾತ್ರಿ ಹರಿಕಥೆ ನಡೆಯುತ್ತಲಿತ್ತು. ಊಟವಾದ ನಂತರ ರಾಜುಲು ಅವರು ಅಲ್ಲಿಗೆ ಹೋಗಿ ಶ್ರೋತೃಗಳ ಮಧ್ಯೆ ಕುಳಿತರು. "ಕೃಷ್ಣನು ಒಬ್ಬ ಚೋರ, ಅವನು ಎಲ್ಲಿಗೆ ಬೇಕಾದರೂ ಹೋಗಬಲ್ಲ. ಕದಹಾಕಿದ ಬಾಗಿಲು ಅವನಿಗೇನೂ ಅಡ್ದಿಯಾಗುವುದಿಲ್ಲ. ಯಾರೇ ಆದರೂ ಗೋವಿಂದಾ ಎಂದು ಕರೆದರೆ ತ್ವರೆಯಿಂದ ಅಲ್ಲಿಗೆ ಹೋಗಿ ಏನು ಬೇಕೆಂದು ಕೇಳುವನು. ಸಕಲ ಜೀವಿಗಳಲ್ಲೂ ಅವನಿಗಿರುವ ಪ್ರೇಮ ಅಂಥದು" ಎಂದು ಮುಂತಾಗಿ ಭಾಗವತರು ಉಪನ್ಯಾಸ ಮಾಡುತ್ತಿದ್ದರು. ಎಲ್ಲರಿಗೂ ಪ್ರವಚನದ ಈ ಭಾಗ ಇಷ್ಟವಾಗಿ ತಲೆದೂಗುತ್ತಿದ್ದರು. ಆದರೆ ಅದನ್ನು ನಿಜವಾಗಿ ಅರ್ಥಮಾಡಿಕೊಂಡವರು ಚೆಟ್ಟಿಯಾರರೊಬ್ಬರೇ ಎಂದು ಕಾಣುತ್ತದೆ. ಅವರು ಎದ್ದು ನೇರವಾಗಿ ವೇದಿಕೆಯ ಬಳಿಗೆ ಹೋದರು. ಭಾಗವತರಿಗೆ ಕೈ ಜೋಡಿಸಿ ನಮಸ್ಕರಿಸಿ "ಸ್ವಾಮೀ, ನಾನು ಕಣ್ಣನನ್ನು ಕಣ್ಣಾರೆ ಕಂಡಿದ್ದೇನೆ" ಎಂದರು. ಆಗ ಹಲವು ಸಭಾಸದರು ಈ ಲೋಭಿ ಚೆಟ್ಟಿಯಾರರು ಹಾಸ್ಯ ಮಾಡುತ್ತಿದ್ದಾರೆ ಎಂದು ಕೊಂಡರು. ಮತ್ತೆ ಕೆಲವರು ನಕ್ಕು ಅವರನ್ನು ಗೇಲಿ ಮಾಡಿದರು. ಇನ್ನೂ ಕೆಲವರು, "ರಾಜುಲು ಅವರೇ, ನೀವು ಸುಮ್ಮನೆ ಕುಳಿತುಕೊಳ್ಳಿ" ಎಂದರು. ಒಟ್ಟಿನಲ್ಲಿ ಸ್ವಲ್ಪ ಅಶಾಂತಿ ಉಂಟಾಯಿತು. ಭಾಗವತರು ಕಷ್ಟದಿಂದ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಚೆಟ್ಟಿಯಾರರು ಮನೆಗೆ ಹಿಂತಿರುಗಿದರು.

ಮಾರನೆಯ ದಿನ ಅವರು ತಮ್ಮ ಲಾಯರನ್ನು ಮನೆಗೆ ಕರೆಸಿ ಎರಡು ದಾನಪತ್ರಗಳನ್ನು ಸಿದ್ಧ ಮಾಡಿದರು. ಒಂದರಲ್ಲಿ ಕುರುಡ ಕುಂಟ ಮುಂತಾದ ಅಂಗವಿಹೀನರಿಗೆ ಒಂದು ಆಶ್ರಯವನ್ನು ಸ್ಥಾಪಿಸಲು ೨೦೦೦೦ ರೂಪಾಯಿಗಳನ್ನು ಮೀಸಲಾಗಿಟ್ಟರು. ಇನ್ನೊಂದರಲ್ಲಿ ಬಡ ಹೆಣ್ಣುಮಕ್ಕಳ ಪ್ರಸೂತಿ ಗೃಹಕ್ಕೆಂದು ೫೦೦೦೦ ರೂಪಾಯಿಗಳನ್ನು ತೆಗೆದಿಟ್ಟರು.

ರಾಜುಲು ಚೆಟ್ಟಿಯಾರರ ಈ ಅನಿರೀಕ್ಷಿತ ದಾನಶೀಲತೆ ಊರಲ್ಲಿ ಎಲ್ಲರಿಗೂ ತಿಳಿಯಿತು, "ಈ ಕೃಪಣನು ಒಮ್ಮೆಲೇ ಧರ್ಮಾತ್ಮನಾದದ್ದು ಹೇಗೆ?" ಎಂದು ಎಲ್ಲರೂ ಆಶ್ಚರ್ಯ ಪಟ್ಟರು. ಭಾಗವತರಾದರೋ ತಮ್ಮ ಶಿಷ್ಯರೊಂದಿಗೆ "ನೋಡಿದಿರೋ, ನನ್ನ ಪ್ರವಚನದ ಪ್ರಭಾವ!" ಎಂದು ಹೆಮ್ಮೆ ಪಟ್ಟರು. ಅವರ ಶಿಷ್ಯರು "ಸ್ವಾಮಿ, ಕೃಷ್ಣ ಜಯಂತಿಯ ದಿನದ ನಿಮ್ಮ ಪ್ರವಚನ ಎಂಥ ಕಲ್ಲೆದೆಯನ್ನೂ ಕರಗಿಸಿಬಿಡುತ್ತಿತ್ತು." ಎಂದು ಗುರುಗಳನ್ನು ಪ್ರಶಂಸಿದರು.

ಆದರೆ ಯಾರೂ ಇದನ್ನು ಕೃಷ್ಣನ ಮಾಯೆ ಎಂದು ತಿಳಿಯಲಿಲ್ಲ. ಚೆಟ್ಟಿಯಾರರೂ ಯಾರಿಗೂ ಹೇಳಲಿಲ್ಲ. ಹೇಳಿದ್ದರೂ ಅವರನ್ನು ನಂಬುವವರು ಯಾರು? 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಡಾ. ಸಿ.ವಿ. ಮಧುಸೂದನ

ಬೆಂಗಳೂರಿನ IISc ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು, Monash University ಯಲ್ಲಿ PhD ಮುಗಿಸಿ, University of NSW ನಲ್ಲಿ 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ, ಅಸೋಸಿಯೇಟ್ ಪ್ರೊಫೆಸರಾಗಿ ನಿವೃತ್ತರಾಗಿರುವ ಡಾ|| ಮಧುಸೂದನ ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವಿದೆ. ತಮ್ಮ ವೃತ್ತಿ ಜೀವನದಲ್ಲಿ ಇವರು ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನೂ, Thermal Contact Conductance ಎಂಬ ಸಂಶೋಧನಾತ್ಮಕ ಗ್ರಂಥವನ್ನೂ ರಚಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ಇಂಡಿಯಾ ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅನೇಕ ಬಾರಿ ಕೆಲಸಮಾಡಿದ್ದಾರೆ. ಇವರು ಬರೆದಿರುವ ಇಂಗ್ಲಿಷ್ ಮತ್ತು ಕನ್ನಡ ಸಾರ್ವಲೌಕಿಕ ಲೇಖನಗಳು ನಮ್ಮ ವೆಬ್ ಸೈಟ್ ಮಾತ್ರವಲ್ಲದೇ ಜನಪ್ರಿಯ ಪತ್ರಿಕೆಗಳಾದ ಸುಧಾ, ಕಸ್ತೂರಿ ಹಾಗೂ ಸಿಡ್ನಿಯ ವಿಚಾರ ಸಂಧ್ಯಾ ಮತ್ತು Bhavan’s Journal ಗಳಲ್ಲಿ ಪ್ರಕಟವಾಗಿವೆ. ಇವರ Lives of the Twelve Alvars ಎಂಬ ಕಿರು ಪುಸ್ತಕವನ್ನು ಹೆಲೆನ್ಸ್ ಬರ್ಗಿನ ಶ್ರೀ ವೆಂಕಟೇಶ್ವರ ದೇವಾಲಯದವರು ಪ್ರಕಟಿಸಿದ್ದಾರೆ.


ಡಾ. ಸಿ.ವಿ. ಮಧುಸೂದನ ಅವರಿಂದ ಮತ್ತಷ್ಟು ಲೇಖನಗಳು


pictureಭಕ್ತಿ,ಭಕ್ತರು ಮತ್ತು ಸಂಸ್ಕೃತಿ
pictureಇನ್ನೂ ನಾನು ಕಲಿಯುತ್ತಿದ್ದೇನ
pictureಪ್ರಮಾದೋ ಧೀಮತಾಮಪಿ
pictureಜ್ಞಾನೋದಯ
pictureಅನರ್ಥ ಸಾಧನ
pictureಡಯೋಜನೀಸ್
pictureಆರ್ಯಭಟ ಮತ್ತು ಆರ್ಯಭಟೀಯ
pictureಫಾ ಹಿಯೆನ್
pictureಸುಭಾಷಿತಗಳು ಮತ್ತು ಹಾಸ್ಯ
pictureಭಾಸಕವಿ ಮತ್ತು ಊರುಭಂಗ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025