ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅನರ್ಥ ಸಾಧನ

picture

 ಪೈಥಾಗೋರಸ್ ಎಂದರೆ ಎಲ್ಲರಿಗೂ ನೆನಪು ಬರುವುದು ಅವನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಪ್ರಮೇಯ:     c2 = a2 + b2 (ಚಿತ್ರವನ್ನು ನೋಡಿ) 

ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿದ್ದ, ಎಂದರೆ ಗೌತಮ ಬುದ್ಧನ ಸಮಕಾಲೀನನಾಗಿದ್ದ, ಈ ಪೈಥಾಗೋರಸನು ಪ್ರಸಿದ್ಧ ದಾರ್ಶನಿಕನೂ ಆಗಿದ್ದನು. ಈತನು ಕೋಪವನ್ನು ಕುರಿತು ಹೀಗೆ ಹೇಳಿದ್ದಾನೆ:

ಕೋಪವು ಪ್ರಾರಂಭವಾಗುವುದು ಮೂರ್ಖತನದಿಂದ, ಕೊನೆಗೊಳ್ಳುವುದು ಪಶ್ಚಾತ್ತಾಪದಿಂದ .

ಭಗವಾನ್ ಶ್ರೀಕೃಷ್ಣನೂ ಗೀತೆಯಲ್ಲಿ ಹೀಗೆ ತಿಳಿಹೇಳಿದ್ದಾನೆ (ಸಾಂಖ್ಯ ಯೋಗ, ೬೩):

ಕ್ರೋದಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ |

ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||

ಅರ್ಥ: ಕ್ರೋಧದಿಂದ ಅವಿವೇಕದ ಆವೇಶವಾಗುತ್ತದೆ; ಅವಿವೇಕದಿಂದ ಮತಿಭ್ರಮೆ; ಮತಿಭ್ರಮೆಯಿಂದ ಬುದ್ಧಿನಾಶ; ಬುದ್ಧಿನಾಶದಿಂದ ಸರ್ವನಾಶ.

ಈ ಮಾತುಗಳು ಎಷ್ಟು ನಿಜವೆಂದು ನಮಗೆಲ್ಲರಿಗೂ ತಿಳಿದ ವಿಷಯವೇ. ಮಹಾಭಾರತ ಯುದ್ಧಕ್ಕೆ ದ್ರೌಪದಿಯ ಕ್ರೋಧ ಮತ್ತು ದುರ್ಯೋಧನನ ಹಟಗಳೇ ಮೂಲಕಾರಣಗಳು. ದ್ರೌಪದಿಯ ಕೋಪವನ್ನು ಪ್ರಚೋದಿಸಿದ್ದು ತುಂಬಿದ ಸಭೆಯಲ್ಲಿ ದುರ್ಯೋಧನ ಮುಂತಾದವರಿಂದ ಆಕೆಗೆ ಆದ ಅವಮಾನ. ದುರ್ಯೋಧನನು ಹೀಗೆ ಅವಳನ್ನು ಅವಮಾನಿಸಿದ್ದೂ, ದ್ರೌಪದಿ ಮತ್ತು ಆಕೆಯ ಸಖಿಯರು ರಾಜಸೂಯ ಯಾಗದ ಸಮಯದಲ್ಲಿ ಅವನನ್ನು ಪರಿಹಾಸ್ಯ ಮಾಡಿ ನಕ್ಕಾಗ ಅವನಿಗೆ ಉಂಟಾದ ಕೋಪದಿಂದಲೇ.

ಈ ಕೋಪ ಮತ್ತು ಹಟಗಳ ಪರಿಣಾಮವೇನಾಯಿತು? ದ್ರೌಪದಿಯ ತಂದೆ, ಇಬ್ಬರು ಅಣ್ಣಂದಿರು ಮತ್ತು ಆಕೆಯ ಎಲ್ಲ ಪುತ್ರರೂ ಯುದ್ಧದಲ್ಲಿ ಅಥವ ಯುದ್ಧಾನಂತರ ಅಶ್ವತ್ಥಾಮನು ಎಸಗಿದ ಮಾರಣ ಹೋಮದಲ್ಲಿ ಕೊಲೆಗೀಡಾದರು. ದುರ್ಯೋಧನನ ಎಲ್ಲ ತಮ್ಮಂದಿರೂ, ಅವನ ಪ್ರಿಯಮಿತ್ರನಾದ ಕರ್ಣನೂ ಅವನಿಗಿಂತ ಮುಂಚೆಯೇ ಹತರಾದರು. ಅವನ ನೆಚ್ಚಿನ ಮಗನಾದ ಲಕ್ಷ್ಮಣನನ್ನೂ, ಅಭಿಮನ್ಯುವು ಅವನ ಕಣ್ಣೆದುರಿಗೇ ಸಂಹರಿಸಿದನು.

ಕೋಪದಿಂದ ಇಷ್ಟೆಲ್ಲ ಅನರ್ಥಗಳೂ, ಅನಾಹುತಗಳೂ ಸಂಭವಿಸಬಹುದೆಂದು ಚೆನ್ನಾಗಿ ಅರಿತಿದ್ದ ಮಹಾತ್ಮ ವಿದುರನು ಯುದ್ಧಕ್ಕಿಂತ ಮುಂಚೆಯೇ ಧೃತರಾಷ್ಟ್ರನಿಗೆ ಈ ರೀತಿ ಬೋಧಿಸಿದ್ದನು (ಕುಮಾರವ್ಯಾಸ ಭಾರತ, ಉದ್ಯೋಗ ಪರ್ವ, ಮೂರನೆಯ ಸಂಧಿ, ೧೧೩):

ಕೋಪವೆಂಬುದನರ್ಥ ಸಾಧನ

ಕೋಪವೇ ಸಂಸಾರ ಬಂಧನ

ಕೋಪದಿಂದಿಹಪರದ ಸೌಖ್ಯವು ಲಯವನೈದುವುದು |

ಕೋಪವನು ವಿಸರ್ಜಿಸಲು ಬೇಹುದು

ಕೋಪವುಳ್ಳವನಾವನಾಗಲು

ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ||

ಆದರೆ ವಿದುರನ ಮಾತುಗಳಿಗೆ ಯಾರೂ ಕಿವಿಗೊಡಲಿಲ್ಲ,

ಕೋಪದಿಂದುಂಟಾಗುವ ದುಷ್ಪರಿಣಾಮಗಳನ್ನು ವಿವರಿಸಲು ಪುರಾಣ ಇತಿಹಾಸಗಳ ನಿದರ್ಶನಗಳೇ ಬೇಕಾಗಿಲ್ಲ. ಹೆಂಡತಿಯ ಮೇಲಿನ ಕೋಪದಿಂದ ಗಂಡನೂ, ಗಂಡನಮೇಲಿನ ಕೋಪದಿಂದ ಹೆಂಡತಿಯೂ ತಮ್ಮ ಮಕ್ಕಳನ್ನೇ ಕೊಲೆ ಮಾಡಿರುವುದನ್ನೂ, road rage ಮುಂತಾದ ಕ್ಷುಲ್ಲಕ ಕಾರಣಗಳಿಂದ ಒಬ್ಬರನ್ನೊಬ್ಬರು ಘಾತಿಸುವುದನ್ನೂ ನೀವು ಕೇಳಿಯೇ ಇರುತ್ತೀರಿ. ಇಂಥ ಸಂದರ್ಭಗಳನ್ನು ನೋಡಿದಾಗ ರೋಮನ್ ಚಕ್ರವರ್ತಿ ಮಾರ್ಕಸ್ ಔರೇಲಿಯಸ್ಸನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅಂದಿದ್ದು ನೆನಪಿಗೆ ಬರುತ್ತದೆ:

ಕೋಪದ ಕಾರಣಗಳಿಗಿಂತಲೂ, ಅಂಥ ಕೋಪದ ಪರಿಣಾಮಗಳೇ ಹೆಚ್ಚು ದುಃಖಕರವಾದುವು.

ಆದರೆ ಈ ಕೋಪವನ್ನು ನಿಯಂತ್ರಿಸುವುದು ಹೇಗೆ? ಭಗವಾನ್ ಬುದ್ಧನೇನೋ "ಅಕ್ಕೋಧೇನ ಜಿನೇತ್ ಕೋಧಂ", ಎಂದರೆ "ಕೋಪವನ್ನು ವಿಶ್ವಾಸದಿಂದ ಜಯಿಸಬೇಕು" ಎಂದು ಉಪದೇಶಿಸುತ್ತಾನೆ. ನಮ್ಮ ಸರ್ವಜ್ಞನೂ "ಮುನಿವಂಗೆ ಮುನಿಯದಿರು" ಎಂದು ಬುದ್ಧಿ ಹೇಳುತ್ತಾನೆ. ಆಧುನಿಕ ಚಿಂತಕರು ಕ್ರೋಧನಿಯಂತ್ರಣದ ಬಗ್ಗೆ ಅನೇಕ ಸಲಹೆಗಳನ್ನು ಕೊಡುತ್ತಾರೆ:

*ಕೋಪ ಬಂದಾಗ ಬಾಯಿಗೆ ಬಂದದ್ದು ಮಾತನಾಡದೆ ನಿಧಾನವಾಗಿ ಒಂದರಿಂದ ಹತ್ತರವರೆಗೆ ಎಣಿಸು

*ಸಾಧ್ಯವಾದರೆ ಆ ಸ್ಥಳದಿಂದ ನಿರ್ಗಮಿಸು

*ಧ್ಯಾನ, ಯೋಗಾಭ್ಯಾಸ ಮಾಡು

*ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕಿಂತಲೂ ವಿನಾಶಕಾರಿ ಪ್ರವೃತ್ತಿ ಮತ್ತೊಂದಿಲ್ಲ

*ಯಾರೋ ಒಬ್ಬ ವ್ಯಕ್ತಿ ನಿಮಗೆ ದ್ರೋಹ ಅಥವಾ ಮೋಸ ಮಾಡಿದನೆಂದು ಅವನ ಜನಾಂಗದವರ ಮೇಲೆಯೇ ಕೋಪಗೊಳ್ಳಬೇಡ

*ಬಲವಂತನು ನಿನ್ನ ಮೇಲೆ ಕೋಪ ಮಾಡಿದನೆಂದು, ಆ ಕೋಪವನ್ನು ಬಲಹೀನನ ಮೇಲೆ ತೋರಿಸಿಕೊಳ್ಳಬೇಡ ಇತ್ಯಾದಿ ಇತ್ಯಾದಿ.

"ಸ್ವಾಮೀ, ಇದೆಲ್ಲವೂ ಸರಿಯೇ. ಆದರೆ Easier said than done, ಆಡುವುದು ಸುಲಭ ಮಾಡುವುದು ಕಷ್ಟ ಅಲ್ಲವೇ?" ಎಂದು ನೀವು ಕೇಳಬಹುದು. ಅದೇನೋ ನಿಜವೇ. ಆದರೂ ಕೋಪದಿಂದ ನಮ್ಮ ಮೇಲೂ ನಮಗೆ ಸಂಬಂಧಪಟ್ಟವರ ಮೇಲೂ ಸಂಭವಿಸುವ ಅನರ್ಥಗಳನ್ನು ಗಮನಿಸಿದಾಗ ಸ್ವಲ್ಪ ಪ್ರಯತ್ನವನ್ನಾದರೂ ಮಾಡಲೇಬೇಕು ಎನಿಸುತ್ತದಲ್ಲವೆ?

ತನ್ನ ಕ್ರೋಧದ ಭರದಲ್ಲಿ ಇಡೀ ಲಂಕಾನಗರವನ್ನೇ ದಹಿಸಿದ ಹನುಮಂತನು "ಅಯ್ಯೋ ಕೋಪದಲ್ಲಿ ಎಂಥ ಕೆಲಸ ಮಾಡಿಬಿಟ್ಟೆ; ಈ ಉರಿಯಲ್ಲಿ ಸೀತೆಯೂ ದಗ್ಧಳಾದಳೋ ಏನೋ" ಎಂದು ಮರುಗಿ ಹೀಗನ್ನುತ್ತಾನೆ (ವಾಲ್ಮೀಕಿ ರಾಮಾಯಣ, ಸುಂದರಕಾಂಡ, ಸರ್ಗ ೫೫, ಶ್ಲೋಕ ೩):

ಧನ್ಯಾಸ್ತೇ ಪುರುಷಶ್ರೇಷ್ಠಾಃ ಯೇ ಬುದ್ಧ್ಯಾ ಕೋಪಮುತ್ಥಿತಮ್ |

ನಿರುಂಧಂತಿ ಮಹಾತ್ಮಾನೋ ದೀಪ್ತಮಗ್ನಿಮಿವಾಂಭಸಾ ||

ಅರ್ಥ: ಉರಿಯುತ್ತಿರುವ ಜ್ವಾಲೆಯನ್ನು ನೀರು ಶಾಂತಗೊಳಿಸುವಂತೆ ತಮ್ಮ ವಿವೇಚನೆಯಿಂದ ಕೋಪೋದ್ರೇಕವನ್ನು ಯಾರು ನಿಯಂತ್ರಿಸಬಲ್ಲರೋ, ಅಂಥ ಪುರುಷಶ್ರೇಷ್ಠರೇ ಧನ್ಯರು.

ನಮ್ಮ ಮಾತಿನಲ್ಲಿ ಹೇಳುವುದಾದರೆ: ಕಡುಕೋಪ ಬಂದಾಗ, ತಡೆದುಕೊಂಡವನೇ ಜಾಣ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಡಾ. ಸಿ.ವಿ. ಮಧುಸೂದನ

ಬೆಂಗಳೂರಿನ IISc ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು, Monash University ಯಲ್ಲಿ PhD ಮುಗಿಸಿ, University of NSW ನಲ್ಲಿ 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ, ಅಸೋಸಿಯೇಟ್ ಪ್ರೊಫೆಸರಾಗಿ ನಿವೃತ್ತರಾಗಿರುವ ಡಾ|| ಮಧುಸೂದನ ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವಿದೆ. ತಮ್ಮ ವೃತ್ತಿ ಜೀವನದಲ್ಲಿ ಇವರು ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನೂ, Thermal Contact Conductance ಎಂಬ ಸಂಶೋಧನಾತ್ಮಕ ಗ್ರಂಥವನ್ನೂ ರಚಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ಇಂಡಿಯಾ ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅನೇಕ ಬಾರಿ ಕೆಲಸಮಾಡಿದ್ದಾರೆ. ಇವರು ಬರೆದಿರುವ ಇಂಗ್ಲಿಷ್ ಮತ್ತು ಕನ್ನಡ ಸಾರ್ವಲೌಕಿಕ ಲೇಖನಗಳು ನಮ್ಮ ವೆಬ್ ಸೈಟ್ ಮಾತ್ರವಲ್ಲದೇ ಜನಪ್ರಿಯ ಪತ್ರಿಕೆಗಳಾದ ಸುಧಾ, ಕಸ್ತೂರಿ ಹಾಗೂ ಸಿಡ್ನಿಯ ವಿಚಾರ ಸಂಧ್ಯಾ ಮತ್ತು Bhavan’s Journal ಗಳಲ್ಲಿ ಪ್ರಕಟವಾಗಿವೆ. ಇವರ Lives of the Twelve Alvars ಎಂಬ ಕಿರು ಪುಸ್ತಕವನ್ನು ಹೆಲೆನ್ಸ್ ಬರ್ಗಿನ ಶ್ರೀ ವೆಂಕಟೇಶ್ವರ ದೇವಾಲಯದವರು ಪ್ರಕಟಿಸಿದ್ದಾರೆ.


ಡಾ. ಸಿ.ವಿ. ಮಧುಸೂದನ ಅವರಿಂದ ಮತ್ತಷ್ಟು ಲೇಖನಗಳು


pictureಭಕ್ತಿ,ಭಕ್ತರು ಮತ್ತು ಸಂಸ್ಕೃತಿ
pictureಇನ್ನೂ ನಾನು ಕಲಿಯುತ್ತಿದ್ದೇನ
pictureಪ್ರಮಾದೋ ಧೀಮತಾಮಪಿ
pictureಜ್ಞಾನೋದಯ
pictureಅನರ್ಥ ಸಾಧನ
pictureಡಯೋಜನೀಸ್
pictureನಮ್ರತೆ
pictureಆರ್ಯಭಟ ಮತ್ತು ಆರ್ಯಭಟೀಯ
pictureಫಾ ಹಿಯೆನ್
pictureಸುಭಾಷಿತಗಳು ಮತ್ತು ಹಾಸ್ಯ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023