ನಮ್ರತೆ

ಬೆಳಗಿನ ಜಾವ ಸುಮಾರು ಐದು ಗಂಟೆ. ಕೊಚ್ಚಿಯಿಂದ ಮದರಾಸಿಗೆ ಹೋಗುತ್ತಿತ್ತು ರೈಲುಗಾಡಿ. ಅದರ ಸ್ಲೀಪರ್ ಬೋಗಿಯಲ್ಲಿದ್ದ ಯಾರೋ ಒಬ್ಬರು ಎದ್ದು ದೇವರ ಸ್ತೋತ್ರಗಳನ್ನು ಹಾಡಲು ಮೊದಲು ಮಾಡಿದರು. ಅವರ ಧ್ವನಿಯ ಸುಶ್ರಾವ್ಯತೆಗೂ, ಗಾಂಭೀರ್ಯಕ್ಕೂ ಆ ಕಂಪಾರ್ಟ್ಮೆಂಟಲ್ಲಿದ್ದ ಎಲ್ಲರೂ ಮಾರುಹೋದರು. ಎದ್ದು ಕುಳಿತು ನಿಶ್ಶಬ್ದವಾಗಿ ಕೇಳತೊಡಗಿದರು. ಆ ಮಹನೀಯರು ಹಾಡುವುದನ್ನು ಮುಗಿಸಿದಾಗ ಕೆಲವರು ಅವರಿಗೆ ಭಕ್ತಿಯಿಂದ ನಮಸ್ಕರಿಸಿದರು. ಒಬ್ಬರು ಮಾತ್ರ “ಸ್ವಾಮೀ, ತಾವು ಯಾರು?” ಎಂದು ಕೇಳಿದರು. ಹಾಡುತ್ತಿದ್ದವರು “ನನ್ನನ್ನು ವೈದ್ಯನಾಥನೆಂದು ಕರೆಯುತ್ತಾರೆ” ಎಂದು ಉತ್ತರಿಸಿದರು. ಆ ಕೂಡಲೇ ಅಲ್ಲಿದ್ದವರೆಲ್ಲರಿಗೂ ಇವರೇ ಪ್ರಖ್ಯಾತ ಗಾಯಕರಾದ ಚೆಂಬೈ ವೈದ್ಯನಾಥ ಭಾಗವತರೆಂದು ಅರಿವಾಯಿತು”. ಎಂಥ ಮಹಾನುಭಾವರು! ಎಷ್ಟು ಇವರ ನಮ್ರತೆ!” ಎಂದು ತಮ್ಮಲ್ಲೇ ಮಾತಾಡಿಕೊಂಡರು.
ಈ ಬಗೆಯ ನಮ್ರತೆ (humility) ಏಕೆ? ಎಂದು ನೀವು ಕೇಳಬಹುದು. ಇದಕ್ಕೆ ಉತ್ತರಿಸುವ ಮುನ್ನ ಇನ್ನಿಬ್ಬರು ವ್ಯಕ್ತಿಗಳನ್ನು ಸ್ಮರಿಸಬೇಕು. ಮೊದಲನೆಯವರು ಭಾರತದ ಸ್ವತಂತ್ರ ಹೋರಾಟಗಾರರಲ್ಲಿ ಅಗ್ರಗಣ್ಯರಾಗಿದ್ದ ಜಮನಾಲಾಲ್ ಬಜಾಜ್. ಇವರು ಬಹಳ ಶ್ರೀಮಂತರು. bajaj auto ಮತ್ತು bajaj electricals ಮುಂತಾದ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿದವರು. ತಮ್ಮ ಅಪಾರ ಸಂಪತ್ತಿನ ಬಹುಭಾಗವನ್ನು ದಾನ ಧರ್ಮಗಳಿಗೆ ವಿನಿಯೋಗಿಸಿದರು. ಬ್ರಿಟಿಷ್ ಸರ್ಕಾರದವರು ತಮಗೆ ಕೊಟ್ಟಿದ್ದ ರಾಯ್ ಬಹದೂರ್ ಪ್ರಶಸ್ತಿಯನ್ನು ಅವರಿಗೇ ಹಿಂತಿರುಗಿಸಿದವರು. ರಾಜಕೀಯ ಖೈದಿಯಾಗಿದ್ದಾಗ ಬಜಾಜರಿಗೆ, ಸಮಾಜದಲ್ಲಿ ಅವರಿಗಿದ್ದ ಅಂತಸ್ತಿನ ಕಾರಣ, A Grade ಜೈಲಿನಲ್ಲಿರಲು ಅನುಮತಿಯಿತ್ತು. ಅದು ಬೇಡವೆಂದು ಸಾಮಾನ್ಯರಿಗೆ ಮೀಸಲಾಗಿದ್ದ C Grade ಜೈಲಿನಲ್ಲೇ ಉಳಿದುಕೊಂಡರು. ಇವರು ನಮ್ರತೆಗೂ ವಿನಯತೆಗೂ ಸಾಟಿಯಿಲ್ಲದವರು. ಬಜಾಜರು ಬರೆದ ‘ಮುಝಸೆ ಸಬ್ ಅಚ್ಛೆ’ - ‘ಎಲ್ಲರೂ ನನಗಿಂತ ಉತ್ತಮರು’ ಎಂಬ ಲೇಖನದ ಶೀರ್ಷಿಕೆ ಮಾತ್ರ ನನಗೆ ಇಂದೂ ಜ್ಞಾಪಕವಿದೆ....
ಇನ್ನೊಬ್ಬ ವ್ಯಕ್ತಿ, ಪ್ರಖ್ಯಾತ ವಿಜ್ಞಾನಿ Isaac Newton. ಅವನು ಹೀಗೆ ಹೇಳಿದ್ದಾನೆ:
“If I have seen further than others, it is by standing upon the shoulders of giants.”
ನಾನು ಇತರರಿಗಿಂತ ದೂರ ನೋಡಬಲ್ಲವನಾಗಿದ್ದರೆ, ಅದಕ್ಕೆ ಕಾರಣ ನಾನು ಮೇಧಾವಿಗಳ ಹೆಗಲ ಮೇಲೆ ನಿಂತಿರುವುದೇ.
ಇಂಥ ಮಹಾತ್ಮರ ವಿನಯವನ್ನು ನೋಡಿದರೆ ನಮ್ರತೆ ಎಂಬುದು ಒಂದು ಮೆಚ್ಚತಕ್ಕ ಗುಣವೇ ಇರಬೇಕು ಎನಿಸುತ್ತದೆ. ಕೆಲವರೇನೋ Humility is an over-rated virtue ಎನ್ನುತ್ತಾರೆ. over-rated ಇರಬಹುದು; virtue ಎಂಬುದಂತೂ ನಿಜ. ಆದರೆ ಬೂಟಾಟಿಕೆಯ ನಮ್ರತೆ ಸಂದೇಹಾಸ್ಪದವೇ ಸರಿ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಇದಕ್ಕೆ ಉತ್ತಮ ಉದಾಹರಣೆ Charles Dickens ಬರೆದಿರುವ David Copperfield ಎಂಬ ಕಾದಂಬರಿಯಲ್ಲಿ ಬರುವ ಮಹಾ ಕಪಟಿ: Uriah Heep.
ಆದರೆ ನಮ್ರನಾಗಿರುವುದರಲ್ಲಿ ಒಂದು ವ್ಯಾವಹಾರಿಕ ಉಪಯುಕ್ತತೆಯೂ ಇದೆ. ಭಗವದ್ಗೀತೆಯ ಆಸುರೀ ಪುರುಷನಂತೆ ‘ಕೋನ್ಯೋಸ್ತಿ ಸದೃಶೋ ಮಯಾ’ – ’ಅರರೇ ಎನ್ನಯ ಸಮಾನರಾರು ಧರಣಿಯೊಳಾರಿಹರು?’ ಎಂದು ಬೀಗಿಕೊಂಡು ತಲೆಯೆತ್ತಿಕೊಂಡು ನಡೆಯುತ್ತಿದ್ದರೆ, ಮುಂದಿನ ಹೆಜ್ಜೆಯಲ್ಲೇ ಮುಗ್ಗರಿಸುವ ಸಂಭವ ಹೆಚ್ಚು. ... ನಮ್ರನೆಂದರೆ ತಲೆ ತಗ್ಗಿಸಿ ನಡೆಯುವವನು ಎಂದೂ ಅರ್ಥವಿದೆಯಲ್ಲವೇ? ಇಂಗ್ಲೀಷಿನಲ್ಲಿ ಹೇಳುವುದಾದರೆ: Humility is the best way to avoid humiliation! ಅದೂ ಅಲ್ಲದೆ ತಲೆ ತಗ್ಗಿಸಿ ನಡೆಯುತ್ತಿದ್ದರೆ, ಕೈಲಾಸಂ ಹೇಳಿದ ಹಾಗೆ ‘ಬೀದಿಯಲ್ಲಿ ಬಿದ್ದಿರುವ ಬಿಡಿಕಾಸು’ ಸಿಗುವ ಸಾಧ್ಯತೆಯೂ ಉಂಟು