ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಡಯೋಜನೀಸ್

picture

ಗ್ರೀಕ್ ತತ್ತ್ವಜ್ಞಾನಿಗಳು (philosophers) ಎಂದರೆ ಎಲ್ಲರ ನೆನಪಿಗೂ ಮೊದಲು ಬರುವವರು ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಮುಂತಾದವರು. ಆದರೆ ಅರಿಸ್ಟಾಟಲನ ಸಮಕಾಲೀನನಾಗಿದ್ದ ಡಯೋಜನೀಸನ ಹೆಸರನ್ನು ಕೇಳಿರುವವರು ವಿರಳ.

ಡಯೋಜನೀಸನು ಆಗಿನ ಕಾಲದಲ್ಲಿ, ಎಂದರೆ ಕ್ರಿ.ಪೂ. ೪ನೆಯ ಶತಮಾನದಲ್ಲಿ, ತುಂಬ ಜನಪ್ರಿಯನಾಗಿದ್ದನು. ಈತನ ಜೀವನ ತುಂಬ ಸರಳವಾದದ್ದು - ಇವನಿಗೆ ಆಸ್ತಿಪಾಸ್ತಿ ಎಂದರೆ ಅನಾಸಕ್ತಿ. ಮನೆಯಲ್ಲಿರುವಾಗಲೆಲ್ಲ ಒಂದು ಸ್ನಾನದ ತೊಟ್ಟಿಯಲ್ಲೇ ಇದ್ದುಬಿಡುತ್ತಿದ್ದನು. ಅಂದಿನ ಗ್ರೀಸಿನಲ್ಲಿ ನಾಯಿಗಳೂ ಸಹ ಇದೇ ರೀತಿಯಲ್ಲಿ ತೊಟ್ಟಿಯಲ್ಲಿ ಮಲಗಿ ವಿರಮಿಸುತ್ತಿದ್ದವಂತೆ. ನಾಯಿಗೆ ಗ್ರೀಕ್ ಭಾಷೆಯಲ್ಲಿ ಸಿನಿಕೋಸ್ ಎಂದೂ, ಲ್ಯಾಟಿನ್ನಿನಲ್ಲಿ ಸಿನಿಕಸ್ ಎಂದೂ ಕರೆಯುತ್ತಾರೆ (ಸಂಸ್ಕೃತದ ಶುನಕ ಎಂಬ ಪದವನ್ನು ಹೋಲಿಸಿ). ಇದರಿಂದ ಡಯೋಜನೀಸ್ ಮತ್ತು ಅವನ ಅನುಯಾಯಿಗಳಿಗೆ cynics ಎಂಬ ಹೆಸರಾಯಿತು. 

    ಇವನು ಒಮ್ಮೆ ಹಾಡೇ ಹಗಲಿನಲ್ಲಿ ದೀವಟಿಗೆಯನ್ನು ಹೊತ್ತಿಸಿಕೊಂಡು, ಏನನ್ನೋ ಹುಡುಕುವನಂತೆ ಅಥೆನ್ಸ್ ನಗರದ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದನು. ‘ಡಯೋಜನೀಸ್! ಏನು ಮಾಡುತ್ತಿದ್ದೀಯೆ?’ ಎಂದು ಜನರು ಕೇಳಲು ‘ಈ ನಗರದಲ್ಲಿ ಕೇವಲ ಒಬ್ಬನಾದರೂ ನಂಬಿಕಸ್ಥನಿದ್ದಾನೆಯೇ ಎಂದು ಹುಡುಕುತ್ತಿದ್ದೇನೆ’ ಎಂದು ಉತ್ತರವಿತ್ತನು. ಈಗ cynics ಎಂದರೆ ಯಾರನ್ನೂ ನಂಬದ ಸಂಶಯಾತ್ಮಕರು ಎಂಬ ಅರ್ಥವಿದೆ. ಇದಕ್ಕೆ ಈ ಕಥೆಯೇ ಕಾರಣವಿರಬಹುದು. 

ಡಯೋಜನೀಸನು ತನ್ನ ಮುಪ್ಪಿನಲ್ಲಿ ಒಮ್ಮೆ ಸಮುದ್ರಯಾನ ಮಾಡುತ್ತಿದ್ದಾಗ ಕಡಲುಗಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಕಾರಿಂಥ್ ಎಂಬ ನಗರಕ್ಕೆ ಕೊಂಡೊಯ್ದು ಅಲ್ಲಿ ಗುಲಾಮನನ್ನಾಗಿ ಮಾರಿದರು. ಅವನನ್ನು ವಿಕ್ರಯಿಸಿದ ಶ್ರೀಮಂತನು, ಆತನು ಯಾರು ಎಂದು ಅರಿವಾದ ಕೂಡಲೇ ಅವನನ್ನು ದಾಸ್ಯದಿಂದ ಬಿಡುಗಡೆ ಮಾಡಿದನು. ಮುಂದೆ ಡಯೋಜನೀಸನು ಮಕ್ಕಳಿಗೆ ಬೋಧಿಸುತ್ತ ಆ ನಗರದಲ್ಲೇ ನೆಲಸಿದನು. 

    ಆ ಸಮಯದಲ್ಲಿ ಪರ್ಷಿಯ ಮತ್ತು ಇಂಡಿಯಾಗಳ ಮೇಲೆ ದಂಡಯಾತ್ರೆಗೆ ಸಿದ್ಧವಾಗುತ್ತಿದ್ದ ಅಲೆಕ್ಸಾಂಡರನು ಕಾರಿಂಥ್ ಪಟ್ಟಣಕ್ಕೆ ಬಂದಿದ್ದನು. ಅಲೆಕ್ಸಾಂಡರನು ಆ ವೇಳೆಗಾಗಲೇ ತುಂಬ ಪ್ರಸಿದ್ಧನಾಗಿದ್ದನು. ಅದು ಮಾತ್ರವಲ್ಲ, ತಾನು ದೇವಾಧಿದೇವನಾದ ಜ಼್ಯೂಸನ ಮಗನೆಂದೇ ಧೃಢವಾಗಿ ನಂಬಿದ್ದನು. ಆದರೂ ಅವನಿಗೆ ಜ್ಞಾನಿಗಳು, ಮೇಧಾವಿಗಳು ಎಂದರೆ ತುಂಬ ಗೌರವವಿತ್ತು. ಅಲೆಕ್ಸಾಂಡರನನ್ನು ಸಂದರ್ಶಿಸಲು ಪುರಪ್ರಮುಖರು, ಪಂಡಿತರು, ವರ್ತಕರು ಮುಂತಾದ ಗಣ್ಯ ವ್ಯಕ್ತಿಗಳೆಲ್ಲರೂ ತಂಡತಂಡವಾಗಿ ಹೋಗುತ್ತಿದ್ದರು. ಡಯೋಜನೀಸನು ಮಾತ್ರ ಹೋಗಲಿಲ್ಲ. ತನ್ನ ಪಾಡಿಗೆ ತಾನಿದ್ದನು. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. "If the mountain won't come to Muhammad then Muhammad must go to the mountain." ಎಂದು ಅದರಂತೆ ಅಲೆಕ್ಸಾಂಡರನು ತಾನೇ ಸ್ವತಃ ಡಯೋಜನೀಸನ ಮನೆಯ ಬಾಗಿಲಿಗೆ ಬಂದು ನಿಂತನು. ಅವರಿಬ್ಬರ ನಡುವೆ ಈ ಸಂಭಾಷಣೆ ನಡೆಯಿತು. 

‘ನಾನು ಅಲೆಕ್ಸಾಂಡರ್ ಎಂಬ ಮಹಾರಾಜ

‘ನಾನು ಡಯೋಜನೀಸ್ ಎಂಬ ನಾಯಿ’

‘ನಿನಗೆ ಏನು ಬೇಕಾದರೂ ಕೇಳು, ಮಾಡಿಸಿಕೊಡುತ್ತೇನೆ’

‘ಸ್ವಾಮಿ, ತಾವು ಸೂರ್ಯನಿಗೂ ನನಗೂ ಮಧ್ಯೆ ನಿಂತು ಕತ್ತಲೆ ಮಾಡಿದ್ದೀರಿ. ಸ್ವಲ್ಪ ಪಕ್ಕಕ್ಕೆ ತೊಲಗಿದರೆ ಮಹದುಪಕಾರವಾಗುವುದು’

‘ಅಯ್ಯಾ, ನಿನಗೆ ನನ್ನನ್ನು ಕಂಡರೆ ಹೆದರಿಕೆಯೇ ಇಲ್ಲವೋ?’ 

‘ಪ್ರಭೂ, ತಾವು ಒಳ್ಳೆಯವರೋ, ಕೆಟ್ಟವರೋ?’ 

‘ನಾನು ಒಳ್ಳೆಯವನೆಂದೇ ಎಲ್ಲರೂ ಹೇಳುತ್ತಾರೆ’

‘ಒಳ್ಳೆಯವರನ್ನು ಕಂಡರೆ ಯಾರಾದರೂ ಹೆದರುತ್ತಾರೆಯೇ?’ 

    ಇನ್ನು ಹೆಚ್ಚು ಮಾತಾಡಿ ಪ್ರಯೋಜನವಿಲ್ಲೆಂದು ಅಲೆಕ್ಸಾಂಡರನು ಅಲ್ಲಿಂದ ಹಿಂತಿರುಗಿದನು. ಈ ಸಂವಾದವನ್ನು ಕೇಳಿಸಿಕೊಂಡಿದ್ದ ಅವನ ಸಂಗಡಿಗರು ಒಳಗೊಳಗೇ ನಗುತ್ತಿದ್ದರು. ಅಲೆಕ್ಸಾಂಡರನು ಅವರಿಗೆ ‘ದಯವಿಟ್ಟು ನಗಬೇಡಿ. ನಾನು ಈ ಜನ್ಮದಲ್ಲಿ ಅಲೆಕ್ಸಾಂಡರನಾಗಿ ಹುಟ್ಟದಿದ್ದರೆ, ಖಂಡಿತವಾಗಿಯೂ ಡಯೋಜನೀಸನಾಗಿ ಹುಟ್ಟಬಯಸುತ್ತಿದ್ದೆ’ ಎಂದು ಹೇಳಿದನು.

     à²¡à²¯à³‹à²œà²¨à³€à²¸à²¨à³ ವೃದ್ಧನಾದನು. ಆಗ ಕೆಲವರು ಅವನ ಬಳಿ ಬಂದು ‘ಅಯ್ಯಾ, ನಿನಗೆ ಹೆಂಡಿರಿಲ್ಲ, ಮಕ್ಕಳಿಲ್ಲ, ಒಬ್ಬ ಸೇವಕನೂ ಇಲ್ಲ. ನೀನು ಸತ್ತರೆ ನಿನ್ನನ್ನು ಹೂಳುವವರು ಯಾರು? ಅಪರ ಕರ್ಮಗಳನ್ನು ಮಾಡುವವರು ಯಾರು?’ ಎಂದು ಮುಂತಾಗಿ ಅಧಿಕ ಪ್ರಸಂಗದ ಮಾತುಗಳನ್ನಾಡಿದರು. ಡಯೋಜನೀಸನು ನಗುತ್ತಲೇ ‘ನನ್ನ ಈ ಮನೆ ಯಾರಿಗೆ ಬೇಕಾಗಿದೆಯೋ, ಅವರೇ ಇದೆಲ್ಲವನ್ನೂ ಮಾಡುವರು, ನೀವು ವೃಥಾ ಚಿಂತಿಸಬೇಡಿ’ ಎಂದು ಹೇಳಿ ಆ ಧೂರ್ತರನ್ನು ಸಾಗಹಾಕಿದನು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಡಾ. ಸಿ.ವಿ. ಮಧುಸೂದನ

ಬೆಂಗಳೂರಿನ IISc ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು, Monash University ಯಲ್ಲಿ PhD ಮುಗಿಸಿ, University of NSW ನಲ್ಲಿ 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ, ಅಸೋಸಿಯೇಟ್ ಪ್ರೊಫೆಸರಾಗಿ ನಿವೃತ್ತರಾಗಿರುವ ಡಾ|| ಮಧುಸೂದನ ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವಿದೆ. ತಮ್ಮ ವೃತ್ತಿ ಜೀವನದಲ್ಲಿ ಇವರು ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನೂ, Thermal Contact Conductance ಎಂಬ ಸಂಶೋಧನಾತ್ಮಕ ಗ್ರಂಥವನ್ನೂ ರಚಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ಇಂಡಿಯಾ ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅನೇಕ ಬಾರಿ ಕೆಲಸಮಾಡಿದ್ದಾರೆ. ಇವರು ಬರೆದಿರುವ ಇಂಗ್ಲಿಷ್ ಮತ್ತು ಕನ್ನಡ ಸಾರ್ವಲೌಕಿಕ ಲೇಖನಗಳು ನಮ್ಮ ವೆಬ್ ಸೈಟ್ ಮಾತ್ರವಲ್ಲದೇ ಜನಪ್ರಿಯ ಪತ್ರಿಕೆಗಳಾದ ಸುಧಾ, ಕಸ್ತೂರಿ ಹಾಗೂ ಸಿಡ್ನಿಯ ವಿಚಾರ ಸಂಧ್ಯಾ ಮತ್ತು Bhavan’s Journal ಗಳಲ್ಲಿ ಪ್ರಕಟವಾಗಿವೆ. ಇವರ Lives of the Twelve Alvars ಎಂಬ ಕಿರು ಪುಸ್ತಕವನ್ನು ಹೆಲೆನ್ಸ್ ಬರ್ಗಿನ ಶ್ರೀ ವೆಂಕಟೇಶ್ವರ ದೇವಾಲಯದವರು ಪ್ರಕಟಿಸಿದ್ದಾರೆ.


ಡಾ. ಸಿ.ವಿ. ಮಧುಸೂದನ ಅವರಿಂದ ಮತ್ತಷ್ಟು ಲೇಖನಗಳು


pictureಭಕ್ತಿ,ಭಕ್ತರು ಮತ್ತು ಸಂಸ್ಕೃತಿ
pictureಇನ್ನೂ ನಾನು ಕಲಿಯುತ್ತಿದ್ದೇನ
pictureಪ್ರಮಾದೋ ಧೀಮತಾಮಪಿ
pictureಜ್ಞಾನೋದಯ
pictureಅನರ್ಥ ಸಾಧನ
pictureಡಯೋಜನೀಸ್
pictureಆರ್ಯಭಟ ಮತ್ತು ಆರ್ಯಭಟೀಯ
pictureಫಾ ಹಿಯೆನ್
pictureಸುಭಾಷಿತಗಳು ಮತ್ತು ಹಾಸ್ಯ
pictureಭಾಸಕವಿ ಮತ್ತು ಊರುಭಂಗ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025